ಚೆನ್ನೈ: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಟೀಕೆಗೆ ಗುರಿಯಾಗಿದ್ದಾರೆ.
ಚೆನ್ನೈನಿಂದ ತಿರುನಾನಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಡೋರ್ ತೆರೆದು ಸಹ ಪ್ರಯಾಣಿಕರಿಗೆ ಆತಂಕದ ವಾತಾವರಣ ಸೃಷ್ಟಿಸಿದ್ದರು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂಡಿಗೋ ವಿಮಾನದಲ್ಲಿ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರೊಂದಿಗೆ ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಾನಪಳ್ಳಿಗೆ ಹೊರಡಲು ವಿಮಾನ ಹತ್ತಿದ್ದರು. ಈ ವೇಳೆ ಅವರು ವಿಮಾನ ತುರ್ತು ನಿರ್ಗಮನ ಡೋರ್ ಲಿವರ್ ಎಳೆದಿದ್ದರು. ಕ್ಷಮಾಪಣೆ ಪತ್ರ ನೀಡಿದ ನಂತರ ಅದೇ ವಿಮಾನದಲ್ಲಿ ಪ್ರಯಾಣ ಮುಂದುವರಿಸಲು ಅವರಿಗೆ ಅನುವು ಮಾಡಿಕೊಡಲಾಗಿದೆ.
ವಿಮಾನಯಾನ ನಿಯಮಗಳ ಅನುಸಾರ ತುರ್ತು ನಿರ್ಗಮನ ಡೋರ್ ತೆರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತೇಜಸ್ವಿ ವಿಚಾರದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ಇಂಡಿಗೋ ಏರ್ ಲೈನ್ಸ್ ಮೃದು ಧೋರಣೆ ಅನುಸರಿಸಿರುವುದು ಟೀಕೆಗೆ ಗುರಿಯಾಗಿದೆ.
ಈ ಘಟನೆಯಿಂದ ವಿಮಾನಯಾನ ಎರಡು ಗಂಟೆ ವಿಳಂಬವಾಗಿತ್ತು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿ, ತೇಜಸ್ವಿ ಸೂರ್ಯ ಅವರನ್ನು ಕುಟುಕಿದ್ದಾರೆ. ಒಂದು ವೇಳೆ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಅಬ್ದುಲ್ ಎಂಬ ಹೆಸರಿನವನು ತೆಗೆದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು. ಆದರೆ, ತೇಜಸ್ವಿ ಸೂರ್ಯ ವಿಚಾರದಲ್ಲಿ ಈ ಘಟನೆ ಆಕಸ್ಮಿಕ ಎಂದು ಕ್ಷಮೆಗೆ ಅರ್ಹತೆ ಪಡೆದುಕೊಂಡಿದೆ. ಆಕಸ್ಮಿಕಕ್ಕೆ ಸಂಸ್ಕಾರಿ ಪದ ಬಳಕೆಯಾಗುತ್ತಿದೆ. ದಯವಿಟ್ಟು ಎಲ್ಲರೂ ನಿಮ್ಮ ಸೀಟ್ ಬೆಲ್ಟ್ ಭದ್ರಪಡಿಸಿಕೊಳ್ಳಿ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.