ಫ್ರಾನ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಶೀಘ್ರದಲ್ಲೇ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ಪ್ಯಾರಿಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫ್ರಾನ್ಸ್ ಯುಪಿಐ ಬಳಕೆಗೆ ಒಪ್ಪಂದ ಮಾಡಿಕೊಂಡಿವೆ. ಭಾರತೀಯ ಪ್ರವಾಸಿಗರು ಐಫೆಲ್ ಟವರ್‌ನಿಂದ ಯುಪಿಐ ಬಳಸಿ ರೂಪಾಯಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ, ಯುಪಿಐ ಪಾವತಿಗಳನ್ನು ಒದಗಿಸುವ ಛತ್ರಿ ಸಂಸ್ಥೆಯಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ಆಫ್ ಇಂಡಿಯಾ(ಎನ್‌ಪಿಸಿಐ), ಫ್ರಾನ್ಸ್‌ನ ಆನ್‌ಲೈನ್ ಪಾವತಿ ವ್ಯವಸ್ಥೆ ‘ಲೈರಾ’ ಜೊತೆಗೆ ಎಂಒಯುಗೆ ಸಹಿ ಹಾಕಿದೆ.
ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ‘ಮೋದಿ, ಮೋದಿ’ ಮತ್ತು ‘ಭಾರತ್ ಮಾತಾ ಕಿ ಜೈ’ಎಂಬ ಘೋಷಣೆಗಳ ನಡುವೆ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಸುಮಾರು ಒಂದು ಗಂಟೆ ಭಾಷಣ ಮಾಡಿದ ಪ್ರಧಾನಿ ಮೋದಿ, ಸೆರ್ಜಿ ಪ್ರಿಫೆಕ್ಚರ್‌ನಲ್ಲಿ ಮಹಾನ್ ತಮಿಳು ತತ್ವಜ್ಞಾನಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಯುರೋಪಿಯನ್ ರಾಷ್ಟ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಫ್ರಾನ್ಸ್ ದೀರ್ಘಾವಧಿಯ ಐದು ವರ್ಷಗಳ ವೀಸಾಗಳನ್ನು ನೀಡಲಿದೆ. ಮಾರ್ಸಿಲ್ಲೆಯಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.