
ನವದೆಹಲಿ: ಭಾರತದ ಸಾಂಪ್ರದಾಯಿಕ ಪಾನೀಯವಾದ ಗೋಲಿ ಸೋಡಾಕ್ಕೆ ಅಮೆರಿಕ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಗೋಲಿ ಸೋಡಾಕ್ಕೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.
ಲುಲು ಹೈಪರ್ ಮಾರ್ಕೆಟ್ ಕೊಲ್ಲಿ ದೇಶಗಳಲ್ಲಿ ಅತಿದೊಡ್ಡ ಚಿಲ್ಲರೆ ಮಾರಾಟ ಕಂಪನಿಯಾಗಿದ್ದು, ಗೋಲಿ ಪಾಪ್ ಸೋಡಾ ಬ್ರಾಂಡ್ ನಡಿ ಗೋಲಿ ಸೋಡಾ ಮಾರಾಟ ಮಾಡುತ್ತಿದೆ. ಅಲ್ಲದೇ, ಹೊಸ ಪ್ಯಾಕೇಜಿಂಗ್ ಶೈಲಿಯೂ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಬ್ರಿಟನ್, ಯೂರೋಪ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಗೋಲಿ ಸೋಡಾ ಮಾರುಕಟ್ಟೆ ಸೃಷ್ಟಿಸಿಕೊಂಡಿದೆ. ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದಾಗಿ ಮರೆಯಾಗುವ ಹಾದಿಯಲ್ಲಿದ್ದ ಗೋಲಿ ಸೋಡಾ ಸರ್ಕಾರದ ಉತ್ತೇಜನ ಮತ್ತು ರಫ್ತು ಕ್ರಮದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ವೃದ್ಧಿಸಿಕೊಂಡಿದೆ ಎಂದು ಹೇಳಲಾಗಿದೆ.