ಎಲ್ಲ ಕ್ಷೇತ್ರಗಳಂತೆ ಚಿತ್ರರಂಗದಲ್ಲೂ ಸಹ ಸ್ಟಾರ್ ಗಳ ಪುತ್ರ – ಪುತ್ರಿಯರು ಅದೇ ವೃತ್ತಿಯನ್ನು ಆರಿಸಿಕೊಳ್ಳುವುದು ಹೊಸ ಸಂಗತಿ ಏನಲ್ಲ. ಬಾಲಿವುಡ್ ನ ಕಪೂರ್ ಕುಟುಂಬದಿಂದ ಆರಂಭವಾದ ಈ ಸಂಪ್ರದಾಯ ಇಂದಿಗೂ ಕೂಡ ಮುಂದುವರೆದುಕೊಂಡು ಬಂದಿದೆ.
ತೆಲುಗು ಚಿತ್ರರಂಗದಲ್ಲೂ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಅವರು ನಟಿಸಿರುವ ಮಗಧೀರ, ಆರ್ ಆರ್ ಆರ್ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ರಾಮ್ ಚರಣ್ ಚಿತ್ರರಂಗದಲ್ಲಿ ಮಾತ್ರವಲ್ಲ ಉದ್ಯಮ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಉದ್ಯಮ ಕ್ಷೇತ್ರದಲ್ಲೂ ಅವರು ಯಶಸ್ಸು ಕಂಡಿದ್ದು, ಬರೋಬ್ಬರಿ 1350 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಅತಿ ಸಿರಿವಂತ ‘ಸ್ಟಾರ್ ಕಿಡ್’ ಎಂಬ ಹೆಗ್ಗಳಿಕೆಗೆ ರಾಮಚರಣ್ ಪಾತ್ರರಾಗಿದ್ದಾರೆ. ತಮ್ಮದೇ ಆದ ಸ್ವಂತ ಜೆಟ್ ವಿಮಾನ ಮಾತ್ರವಲ್ಲದೆ ಆರು ಐಷಾರಾಮಿ ಕಾರುಗಳನ್ನು ರಾಮಚರಣ್ ಹೊಂದಿದ್ದಾರೆ.
ಅತಿ ಸಿರಿವಂತ ‘ಸ್ಟಾರ್ ಕಿಡ್’ ಪಟ್ಟಿಯಲ್ಲಿ ಹೃತಿಕ್ ರೋಷನ್ ಎರಡನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ 750 ಕೋಟಿ ರೂಪಾಯಿಗಳಾಗಿದೆ. ಇನ್ನು 520 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಅಲಿಯಾ ಭಟ್ ಮೂರನೇ ಸ್ಥಾನದಲ್ಲಿದ್ದು, ಕರೀನಾ ಕಪೂರ್ ಆಸ್ತಿ ಮೌಲ್ಯ 485 ಕೋಟಿ ರೂಪಾಯಿಗಳಾಗಿದೆ. ಜೂನಿಯರ್ ಎನ್ಟಿಆರ್ ಆಸ್ತಿ ಮೌಲ್ಯ 450 ಕೋಟಿ ರೂಪಾಯಿಗಳಾಗಿದ್ದು, ರಣಬೀರ್ ಕಪೂರ್ 365 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪ್ರಭಾಸ್ ಹಾಗು ಅಭಿಷೇಕ್ ಬಚ್ಚನ್ ಕ್ರಮವಾಗಿ 240 ಕೋಟಿ ರೂಪಾಯಿ ಹಾಗೂ 170 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.