ಈ ವರ್ಷದ ಅಂತ್ಯದೊಳಗೆ ದೇಶದ ಸಂಪೂರ್ಣ ಜನಸಂಖ್ಯೆಗೆ ಕನಿಷ್ಟ 1 ಡೋಸ್ ಕೋವಿಡ್ ಲಸಿಕೆಯನ್ನಾದರೂ ಪೂರೈಸಬೇಕು ಎಂಬ ಪ್ರಧಾನಿ ಮೋದಿಯವರ ಗುರಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಹೌದು..! ಅಕ್ಟೋಬರ್ ತಿಂಗಳಲ್ಲಿ ಭಾರತವು ಜಾನ್ಸನ್ & ಜಾನ್ಸನ್ನ ಲಸಿಕೆಗಳನ್ನು ಸ್ವೀಕರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 43.5 ಮಿಲಿಯನ್ ಡೋಸ್ ಸಿಂಗಲ್ ಶಾಟ್ ಡೋಸ್ಗಳು ಭಾರತಕ್ಕೆ ಬರಲಿವೆ. ಇದರಿಂದ ಅಕ್ಟೋಬರ್ ತಿಂಗಳಲ್ಲಿ 30 ಕೋಟಿ ಡೋಸ್ ಉತ್ಪಾದನೆ ಮಾಡಬೇಕು ಎಂಬ ಭಾರತದ ಗುರಿಗೆ ಸಾಕಷ್ಟು ಮುನ್ನಡೆ ಸಿಗಲಿದೆ.
ಭಾರತವು ವಿಶ್ವದಲ್ಲೇ ಅತೀ ದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಬೇಡಿಕೆಯನ್ನು ಪೂರೈಸಲು ಆದ್ಯತೆ ನೀಡುವ ಸಲುವಾಗಿ ಏಪ್ರಿಲ್ ತಿಂಗಳಿನಿಂದ ಲಸಿಕೆ ರಫ್ತಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಲಸಿಕೆ ಮಿತ್ರ ಕಾರ್ಯಕ್ರಮದ ಅಡಿಯಲ್ಲಿ ಕೋವ್ಯಾಕ್ಸ್ ದೆಹಲಿಯಲ್ಲಿ ಮತ್ತೆ ರಫ್ತು ಕಾರ್ಯವನ್ನು ಮುಂದುವರಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಕಳೆದ ತಿಂಗಳು ಜಾನ್ಸನ್ & ಜಾನ್ಸನ್ ಲಸಿಕೆಗಳಿಗೆ ತುರ್ತು ಅನುಮೋದನೆಯನ್ನು ನೀಡಿತ್ತು. ಕಂಪನಿಯ ಭಾರತದ ಪಾಲುದಾರ ಬಯೋಲಾಜಿಕಲ್ ಸ್ಥಳೀಯವಾಗಿ ಲಸಿಕೆಗಳನ್ನು ಸರಬರಾಜು ಮಾಡಲಿದೆ.