ದೇಶದಲ್ಲಿ ಸುತ್ತಾಡಿ ನೋಡಲು ನಾನಾ ಥರ ಜಾಗಗಳಿದ್ದು, ಒಂದೊಂದರಲ್ಲೂ ಭಿನ್ನ ಸಂಸ್ಕೃತಿಗಳು ಹಾಗೂ ಆಚಾರ ವಿಚಾರಗಳು ಕಾಣ ಸಿಗುತ್ತವೆ. ಐತಿಹಾಸಿಕ, ಸಾಂಸ್ಕೃತಿಕ, ಭೌಗೋಳಿಕ ಸೌಂದರ್ಯ….. ಹೀಗೆ ನಾನಾ ಥೀಂಗಳ ಸುತ್ತಾಟಕ್ಕೆ ಜಾಗಗಳಿಗೆಂದೂ ಬರವಿಲ್ಲ ನಮ್ಮ ದೇಶದಲ್ಲಿ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳೊಂದಿಗೆ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುವ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ, ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿಯಲ್ಲಿರುವ ಚಹಾ ಅಂಗಡಿಯೊಂದರ ಚಿತ್ರ ಹಂಚಿಕೊಂಡಿದ್ದಾರೆ.
“ದೇಶದಲ್ಲಿ ಕಾಣಬಲ್ಲ ಅತ್ಯುತ್ತಮ ಸೆಲ್ಫೀ ಸ್ಪಾಟ್‌ಗಳಲ್ಲಿ ಒಂದಾ ಇದು? ಸಾಟಿಯಿಲ್ಲದ ಸ್ಲೋಗನ್ “ಹಿಂದೂಸ್ತಾನದ ಅಂತಿಮ ಅಂಗಡಿ”. ಇಲ್ಲೊಂದು ಕಪ್ ಚಹಾ ಕುಡಿಯುವುದು ಬೆಲೆ ಕಟ್ಟಲಾಗದ ಅನುಭವ,” ಎಂದು ಕ್ಯಾಪ್ಷನ್ ಕೊಟ್ಟು, ದಿ ಬೆಟರ್ ಇಂಡಿಯಾದ ಪೋಸ್ಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ ಮಹಿಂದ್ರಾ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ, ಗಡಿಯ ಭಾರತದ ಕಡೆಗೆ ಇರುವ ಈ ಚಹಾ ಅಂಗಡಿ ಮನಾ ಎಂಬ ಗ್ರಾಮದಲ್ಲಿದೆ. ಈ ಚಹಾ ಅಂಗಡಿಯನ್ನು ಚಂದರ್ ಸಿಂಗ್ ಬದ್ವಾಲ್ ನಡೆಸುತ್ತಿದ್ದಾರೆ – ಊರಿನಲ್ಲಿ 25 ವರ್ಷಗಳ ಹಿಂದೆ ಚಹಾ ಅಂಗಡಿ ತೆರೆದ ಮೊದಲ ವ್ಯಕ್ತಿ ಎಂದು ದಿ ಬೆಟರ್ ಇಂಡಿಯಾ ಈ ಅಂಗಡಿಯ ಪರಿಚಯ ಕೊಟ್ಟಿದೆ.
ಸಮುದ್ರ ಮಟ್ಟದಿಂದ 3118 ಮೀಟರ್ ಎತ್ತರದಲ್ಲಿರುವ ಈ ಚಹಾ ಅಂಗಡಿ ಹಿಮಾಲಯದ ಶ್ರೇಣಿಗಳ ಮಧ್ಯೆ ಸುಂದರವಾದ ತಾಣದಲ್ಲಿದೆ. ಹೊರ ಜಗತ್ತಿನ ಸೋಗಿಲ್ಲದೇ, ಮನಃಶಾಂತಿ ಅರಸುತ್ತಾ ಹಾಗೇ ಒಂದು ಕಪ್ ಬಿಸಿ ಚಹಾ ಹೀರಲು ಸಖತ್ತಾಗಿದೆ ಈ ಜಾಗ.