ತಮಿಳುನಾಡಿನ ಕುನೂರ್ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವು ಭಾರತೀಯ ಸೇನೆ ಹಾಗೂ ಭಾರತೀಯರ ಪಾಲಿಗೆ ತುಂಬಲಾರದ ನಷ್ಟವಾಗಿದೆ.
ಗಡಿ ಬಿಕ್ಕಟ್ಟುಗಳ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ಸಮಯೋಚಿತ್ತದಿಂದ ತೆಗೆದುಕೊಳ್ತಿದ್ದ ರಾವತ್ ನಿಧನ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ತಿಂಗಳಷ್ಟೇ ಚೀನಾ ವಿಚಾರವಾಗಿ ಮಾತನಾಡಿದ್ದ ಬಿಪಿನ್ ರಾವತ್, ಭಾರತದ ಮೊದಲ ಶತ್ರು ಪಾಕಿಸ್ತಾನವಲ್ಲ ; ಚೀನಾ ಎಂದು ಹೇಳಿದ್ದರು. ಬಿಪಿನ್ ರಾವತ್ ನಿಧನಕ್ಕೂ ಮುನ್ನ ಚೀನಾ ವಿರುದ್ಧ ನೀಡಿದ ಕೊನೆಯ ಹೇಳಿಕೆ ಇದಾಗಿದೆ.
ಅವರ ಕಾನೂನು ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಅವಕಾಶ ನೀಡಿದರೆ ಅಲ್ಲಿ ಸ್ಪರ್ಧೆ ಇರುತ್ತದೆ. ಚೀನಾ ಉಪಯೋಗಿಸುವ ಯಾವುದೇ ಮಾನಸಿಕ ತಂತ್ರಗಳಿಂದಾಗಿ ನಾವು ಒತ್ತಡಕ್ಕೆ ಒಳಗಾಗಬಾರದು. ಏಕೆಂದರೆ ಚೀನಾ ಅದನ್ನೇ ಬಯಸುತ್ತದೆ. ನಮ್ಮ ದೊಡ್ಡ ಶತ್ರು ಚೀನಾ, ಪಾಕಿಸ್ತಾನವಲ್ಲ ಎಂದು ರಾವತ್ ಹೇಳಿದ್ದರು.
ರಾವತ್ರ ನೇರ ಹಾಗೂ ದಿಟ್ಟವಾದ ಮಾತುಗಳು ಬೀಜಿಂಗ್ನಲ್ಲೂ ಪ್ರತಿಧ್ವನಿಸಿತ್ತು. ಬೀಜಿಂಗ್ನಲ್ಲಿ ರಾವತ್ ಮಾತಿಗೆ ತೀವ್ರ ಖಂಡನೆಗಳು ವ್ಯಕ್ತವಾಗಿದ್ದವು. ರಾವತ್ ಹೇಳಿಕೆಗಳು ಅಪಾಯಕಾರಿ ಹಾಗೂ ಭೌಗೋಳಿಕ ರಾಜಕೀಯ ಘರ್ಷಣೆಯನ್ನು ಪ್ರಚೋದಿಸಬಹುದು ಎಂದು ಕುತಂತ್ರಿ ಚೀನಾ ಹೇಳಿತ್ತು.
ಭಾರತೀಯ ಸೇನೆಯ ಎಂಐ – 17 ವಿ5 ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಮಂದಿ ಸೇನಾಧಿಕಾರಿಗಳು ತಮಿಳುನಾಡಿನ ಕುನೂರ್ನಲ್ಲಿ ಸಾವನ್ನಪ್ಪಿದ್ದಾರೆ. ರಾವತ್ ವೆಲ್ಲಿಂಗ್ಟನ್ಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನಗೊಂಡು ದುರಂತ ನಡೆದಿತ್ತು.