ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿದೇಶದಿಂದ ಹಣವನ್ನು ಪಡೆಯಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ ಎಂದು ಹೇಳಲಾಗಿದೆ.
ವಿದೇಶಿಯರಿಂದ ಸ್ವಯಂಪ್ರೇರಿತ ಕೊಡುಗೆಯನ್ನು ಸ್ವೀಕರಿಸಲು ಟ್ರಸ್ಟ್ ಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ), ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (FCRA), 2010ರ ಅಡಿಯಲ್ಲಿ ಅನುಮತಿ ನೀಡಿದೆ.
ಈ ಬಗ್ಗೆ ಮೈಕ್ರೋ-ಬ್ಲಾಗಿಂಗ್ ಸೈಟ್ X ನಲ್ಲಿ ಟ್ರಸ್ಟ್ ಪೋಸ್ಟ್ ಹಂಚಿಕೊಂಡಿದ್ದು, ಗೃಹ ವ್ಯವಹಾರಗಳ ಸಚಿವಾಲಯದ (ಭಾರತ ಸರ್ಕಾರ) FCRA ವಿಭಾಗವು ವಿದೇಶಿ ಮೂಲಗಳಿಂದ ಸ್ವಯಂಪ್ರೇರಿತ ಕೊಡುಗೆಯನ್ನು ಸ್ವೀಕರಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ನೋಂದಾಯಿಸಿದೆ ಎಂದು ತಿಳಿಸಿದೆ.
ವಿದೇಶಿಯರು ತಮ್ಮ ಕೊಡುಗೆಗಳನ್ನು ಟ್ರಸ್ಟ್ ಗೊತ್ತುಪಡಿಸಿದ ಬ್ಯಾಂಕ್ ಖಾತೆಗೆ ಮಾತ್ರ ಕಳುಹಿಸಬಹುದು. ವಿದೇಶಿ ನಿಧಿಯನ್ನು ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳು ಅಥವಾ ಟ್ರಸ್ಟ್‌ಗಳು ನಿಯಮಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಂಸದ್ ಮಾರ್ಗ ಶಾಖೆಯಲ್ಲಿ ಮಾತ್ರ ತಮ್ಮ FCRA ಖಾತೆಯನ್ನು ತೆರೆಯಬಹುದು.
ದೇವಸ್ಥಾನದ ನಿರ್ಮಾಣ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಟ್ರಸ್ಟ್ ಈ ವರ್ಷದ ಜೂನ್‌ನಲ್ಲಿ ಎಫ್‌ಸಿಆರ್‌ಎ ಪರವಾನಗಿಗಾಗಿ ಅರ್ಜಿ ಸಲ್ಲಿಸಿತ್ತು. 2020 ರಲ್ಲಿ ಸ್ಥಾಪಿತವಾದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ದೇಶಾದ್ಯಂತದ ಯಾತ್ರಿಕರು ಸೇರಿದಂತೆ ಸಾರ್ವಜನಿಕರಿಂದ ಕೊಡುಗೆಗಳ ಮೂಲಕ ಹಣವನ್ನು ಸಂಗ್ರಹಿಸುತ್ತಿದೆ. ಆದರೆ, ಇದುವರೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ.
ಜನವರಿ 1, 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿಯಲ್ಲಿ ಹೇಳಿದ್ದರು. ಆಗಸ್ಟ್ 5, 2020 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಂದಿನ ವರ್ಷ ಜನವರಿ 21 ಮತ್ತು ಜನವರಿ 24 ರ ನಡುವೆ ರಾಮ ಮಂದಿರದ ಅದ್ಧೂರಿ ಉದ್ಘಾಟನೆಯನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಲಿದ್ದಾರೆ.