ಭಾರತೀಯ ಮಹಿಳೆಯರು ಬದಲಾಗ್ತಿದ್ದಾರೆ, ಆರ್ಥಿಕ ವಿಷ್ಯದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗ್ತಿದ್ದಾರೆ ಎಂಬ ಖುಷಿ ವಿಷ್ಯವೊಂದು ಹೊರಬಿದ್ದಿದೆ. ಡಿಬಿಸಿ ಬ್ಯಾಂಕ್ ಕ್ರಿಸಿಲ್ ಜೊತೆ ಸೇರಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರು ಹಾಗೂ ಅವರ ಆರ್ಥಿಕ ಸ್ಥಿತಿ, ಆದ್ಯತೆ ಬಗ್ಗೆ ಅನೇಕ ಮಾಹಿತಿ ಲಭ್ಯವಾಗಿದೆ.
ಮೆಟ್ರೋ ನಗರಗಳಲ್ಲಿ ಕುಟುಂಬದ ದೀರ್ಘಕಾಲಿಕ ನಿರ್ಧಾರಗಳಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಉಳಿತಾಯದ ಬಗ್ಗೆಯೂ ಅವರ ಆಸಕ್ತಿ ಮೊದಲಿಗಿಂತ ಹೆಚ್ಚಾಗಿದೆ. ಆದ್ರೆ ಬಹುತೇಕ ಮಹಿಳೆಯರು ಅಪಾಯಕಾರಿ ಉಳಿತಾಯಕ್ಕೆ ಕೈ ಹಾಕ್ತಿಲ್ಲ. ಅವರು ಎಫ್ ಡಿ ಯಂತಹ ಕಡಿಮೆ ಅಪಾಯದ ಸಾಧನಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ವಯಸ್ಸು, ಆದಾಯ, ವೈವಾಹಿಕ ಸ್ಥಿತಿ, ಅವಲಂಬಿತರ ಉಪಸ್ಥಿತಿ ಮಹಿಳೆಯರ ಆರ್ಥಿಕ ನಡವಳಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ. ಭಾರತೀಯ ಮಹಾನಗರಗಳಲ್ಲಿ ಶೇಕಡಾ 47 ರಷ್ಟು ಆದಾಯ ಗಳಿಸುವ ಮಹಿಳೆಯರು ಸ್ವತಂತ್ರ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ವಿಶೇಷವಾಗಿ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಕ್ಕಳ ಶಿಕ್ಷಣ ಮತ್ತು ನಿವೃತ್ತಿ ಯೋಜನೆಗಳಿಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. 25-35 ವರ್ಷದೊಳಗಿನ ಜನರಿಗೆ ಮನೆ ಖರೀದಿಸುವುದು, ಅಪ್‌ಗ್ರೇಡ್ ಆಗುವುದು ಮೊದಲ ಆದ್ಯತೆಯಾಗಿದೆ. 35-45 ವರ್ಷ ವಯಸ್ಸಿನವರಿಗೆ ಮಕ್ಕಳ ಶಿಕ್ಷಣ ಮುಖ್ಯವಾದ್ರೆ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ವೈದ್ಯಕೀಯ ಆರೈಕೆ ಮಹತ್ವ ಪಡೆಯುತ್ತದೆ. ಆನ್ಲೈನ್ ಪೇಮೆಂಟ್ ಬಗ್ಗೆಯೂ ಸಮೀಕ್ಷೆ ನಡೆದಿದೆ. ಅದರ ಪ್ರಕಾರ, 25-35 ವಯಸ್ಸಿನ ಶೇಕಡಾ 33 ಜನರು ಆನ್‌ಲೈನ್ ಶಾಪಿಂಗ್‌ಗಾಗಿ ಯುಪಿಐ ಬಳಸುತ್ತಿದ್ದಾರೆ. ಆದ್ರೆ 45 ವರ್ಷ ಮೇಲ್ಪಟ್ಟವರಲ್ಲಿ ಈ ಸಂಖ್ಯೆ ಕೇವಲ ಶೇಕಡಾ 22ರಷ್ಟಿದೆ.