23 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್, ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ. ಪಂದ್ಯಾವಳಿ ನಡೆಯದ ಸಂದರ್ಭದಲ್ಲಿ ಪಂತ್ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಕೋಟ್ಯಾಧಿಪತಿಯಾಗಿರುವ ಪಂತ್, ಸಾಕಷ್ಟು ಸಾಧನೆ ಮಾಡಿದ್ದಾರೆ.
ರಿಷಬ್ ಪಂತ್ 2020 ರಲ್ಲಿ 29.19 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದರು. ಫೋರ್ಬ್ಸ್ 2019ರ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಪಂತ್ 30 ನೇ ಸ್ಥಾನದಲ್ಲಿದ್ದರು. 2021 ರಲ್ಲಿ ಪಂತ್ ನಿವ್ವಳ ಆಸ್ತಿ 36 ಕೋಟಿ ರೂಪಾಯಿ. ಪಂತ್ ವಾರ್ಷಿಕ ಆದಾಯ 10 ಕೋಟಿ ರೂಪಾಯಿ. ಅಂದ್ರೆ ತಿಂಗಳಿಗೆ 80 ಲಕ್ಷ ರೂಪಾಯಿಗೂ ಅಧಿಕ ಗಳಿಕೆ ಮಾಡ್ತಾರೆ ಪಂತ್.
ಬಿಸಿಸಿಐ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿಯಲ್ಲಿ ಪಂತ್ ಎ ಗ್ರೇಡ್ ವಿಭಾಗದಲ್ಲಿ ಬರುತ್ತಾರೆ. ವಾರ್ಷಿಕ 5 ಕೋಟಿ ರೂಪಾಯಿ ಸಂಬಳ ಬರುತ್ತದೆ, ಪ್ರತಿ ಟೆಸ್ಟ್ ಒಂದ್ಯಕ್ಕೆ 3 ಲಕ್ಷ ರೂಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ 2 ಲಕ್ಷ ರೂಪಾಯಿ ಮತ್ತು ಟಿ 20 ಪಂದ್ಯಕ್ಕೆ 1.50 ಲಕ್ಷ ರೂಪಾಯಿ ಪಡೆಯುತ್ತಾರೆ. ಇದಲ್ಲದೆ ಐಪಿಎಲ್ ದೆಹಲಿ ತಂಡದ ನಾಯಕರಾಗಿರುವ ಪಂತ್ ಪ್ರತಿ ಋತುವಿಗೆ 8 ಕೋಟಿ ರೂಪಾಯಿ ಪಡೆಯುತ್ತಾರೆ. ಇದಲ್ಲದೆ ಅನೇಕ ಕಂಪನಿಗಳ ಜಾಹಿರಾತಿನಲ್ಲಿ ಪಂತ್ ಕಾಣಿಸಿಕೊಳ್ತಾರೆ. ಕಳೆದ ವರ್ಷ ಪಂತ್ ಆಸ್ತಿ ಶೇಕಡಾ 40ರಷ್ಟು ಹೆಚ್ಚಾಗಿದೆ. ಐಷಾರಾಮಿ ಕಾರುಗಳನ್ನು ಹೊಂದಿರುವ ಪಂತ್, ಹರಿದ್ವಾರದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ.