ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ ಗೆ ಭಾರತೀಯ ವನಿತೆಯರ ತಂಡ ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ಸಾರಥ್ಯದಲ್ಲಿ ತಂಡ ಆಡಲಿದೆ.
ಈ ಬಾರಿಯ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು ಪ್ರಕಟವಾಗಿದ್ದು, ಹರ್ಮನ್ ಪ್ರೀತ್ ಕೌರ್ ಉಪ ನಾಯಕಿಯಾಗಿದ್ದಾರೆ. ಕನ್ನಡದ ರಾಜೇಶ್ವರಿ ಗಾಯಕ್ವಾಡ್ ತಂಡ ಸೇರಿದ್ದಾರೆ. ಮಾ.4 ರಿಂದ ಏ. 3ರ ವರೆಗೆ ಐಸಿಸಿ ಮಹಿಳಾ ವಿಶ್ವಕಪ್ ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ. ವಿಶ್ವಕಪ್ ಮುಗಿದ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ20 ಹಾಗೂ ವಿಶ್ವಕಪ್ ಗೂ ತಂಡ ಪ್ರಕಟಿಸಲಾಗಿದೆ.
ಭಾರತೀಯ ಮಹಿಳೆಯರ ಅಭಿಯಾನ ಮಾ. 6ರಿಂದ ಆರಂಭವಾಗಲಿದ್ದು, ಬದ್ಧ ಎದುರಾಳಿ ಪಾಕ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ 8 ಮಹಿಳಾ ತಂಡಗಳು ಆಡಲಿವೆ. ಒಟ್ಟು 31 ಪಂದ್ಯಗಳು ನಡೆಯಲಿವೆ.
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಪಾಕಿಸ್ತಾನ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಶ್ರೇಯಾಂಕದ ಆಧಾರದ ಮೇಲೆ ಸ್ಥಾನ ಪಡೆದಿವೆ.
ಮೊದಲ ಸುತ್ತಿನಲ್ಲಿ 8 ತಂಡಗಳು ಪೈಪೋಟಿ ನಡೆಸಿ, ನಾಲ್ಕು ತಂಡಗಳು ಸೆಮಿಫೈನಲ್ ತಲುಪಲಿವೆ. ಭಾರತೀಯ ಮಹಿಳಾ ತಂಡವು ಮಾ. 6ರಂದು ಪಾಕಿಸ್ತಾನ್, ಮಾ. 10ಕ್ಕೆ ನ್ಯೂಜಿಲೆಂಡ್, ಮಾ. 12ಕ್ಕೆ ವೆಸ್ಟ್ ಇಂಡೀಸ್, ಮಾ. 16ಕ್ಕೆ ಇಂಗ್ಲೆಂಡ್, ಮಾ. 19ಕ್ಕೆ ಆಸ್ಟ್ರೇಲಿಯಾ, ಮಾ. 22ಕ್ಕೆ ಬಾಂಗ್ಲಾದೇಶ ಹಾಗೂ ಮಾ. 27ಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ.
ಉತ್ತಮ ಪ್ರದರ್ಶನ ತೋರಿದ್ದ ಬೌಲರ್ ಶಿಖಾ ಪಾಂಡೆ ಹಾಗೂ ಬ್ಯಾಟರ್ ಜಮಿಯಾ ರೊಡ್ರಿಗಸ್ ಅವರನ್ನು ಕೈ ಬಿಡಲಾಗಿದೆ. ಭಾರತೀಯ ತಂಡದಲ್ಲಿ ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪ ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಸ್ತಿಕಾ, ಜೂಲನ್ ಗೋಸ್ವಾಮಿ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ತನಿಯಾ ಭಾಟಿಯ (ವಿಕೆಟ್ ಕೀಪರ್), ರೇಣುಕಾ ಸಿಂಗ್ ಥಾಕೂರ್, ಪೂನಂ, ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ.