ರೈಲ್ವೆ ಪ್ರಯಾಣ ಅತ್ಯಂತ ಆರಾಮದಾಯಕ ಪ್ರಯಾಣವೆಂದು ನಂಬಲಾಗಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ಕಡ್ಡಾಯವಾಗಿರುತ್ತದೆ. ಕೆಲ ಸಂದರ್ಭದಲ್ಲಿ ಟಿಕೆಟ್ ಕಳೆದು ಹೋಗುತ್ತದೆ. ಆಗ ಭಯಪಡುವ ಅಗತ್ಯವಿಲ್ಲ. ರೈಲ್ವೆ ಇಲಾಖೆ ಕೂಡ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದೆ. ನಕಲು ಟಿಕೆಟ್ ನೀಡುತ್ತದೆ. ಆದ್ರೆ ಇದಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ.
ಟಿಕೆಟ್ ಕಳೆದ ಪ್ರಯಾಣಿಕ, ಟಿಕೆಟ್ ಕಾಣೆಯಾಗಿದೆ ಎಂದು ವರದಿ ಮಾಡಬೇಕು. ಆಗ ನಕಲು ಟಿಕೆಟ್ ನೀಡಲಾಗುತ್ತದೆ. ಇದಕ್ಕೆ ಪ್ರಯಾಣಿಕ 50 ರೂಪಾಯಿ ಪಾವತಿಸಬೇಕಾಗುತ್ತದೆ. ದ್ವಿತೀಯ ದರ್ಜೆ ಟಿಕೆಟ್ ಗೆ 100 ರೂಪಾಯಿ ಪಾವತಿಸಬೇಕು.
ಟಿಕೆಟ್ ಹರಿದಿದ್ದರೆ ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸುವ ಮೊದಲು ನಕಲು ಟಿಕೆಟ್ ಗೆ ಅರ್ಜಿ ಸಲ್ಲಿಸಬೇಕು. ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸಿದ ನಂತ್ರ ಅರ್ಜಿ ಸಲ್ಲಿಸಿದ್ರೆ ಆಗ ಒಟ್ಟು ಟಿಕೆಟ್ ನ ಶೇಕಡಾ 25ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮೊದಲೇ ಅರ್ಜಿ ಸಲ್ಲಿಸಿದ್ರೆ ನಕಲು ಟಿಕೆಟ್ ಗೆ ನೀಡುವ ಶುಲ್ಕವನ್ನಷ್ಟೇ ಪಾವತಿಸಬೇಕಾಗುತ್ತದೆ.
ಭಾರತೀಯ ರೈಲ್ವೇಯ ಪ್ರಕಾರ, ವೇಟಿಂಗ್ ಲೀಸ್ಟ್ ನಲ್ಲಿರುವ ಟಿಕೆಟ್ ಗೆ ನಕಲು ಟಿಕೆಟ್ ನೀಡಲಾಗುವುದಿಲ್ಲ. ಆರ್ ಎ ಸಿ ಟಿಕೆಟ್ ವಿಷ್ಯಕ್ಕೆ ಬಂದಾಗ, ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸಿದ ನಂತರ ಯಾವುದೇ ನಕಲು ಟಿಕೆಟ್ ನೀಡಲಾಗುವುದಿಲ್ಲ. ನಕಲು ಟಿಕೆಟ್ ನೀಡಿದ ನಂತರ ಮೂಲ ಟಿಕೆಟ್ ಸಿಕ್ಕರೆ ಹಾಗೂ ರೈಲು ಹೊರಡುವ ಮೊದಲು ಎರಡೂ ಟಿಕೆಟ್‌ಗಳನ್ನು ಅಧಿಕಾರಿಗಳಿಗೆ ತೋರಿಸಿದರೆ, ನಕಲು ಟಿಕೆಟ್‌ಗೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಮೊತ್ತದ ಶೇಕಡಾ 5ರಷ್ಟನ್ನು ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡಲಾಗುವುದು.