ರೈಲ್ವೇ ಸ್ಟೇಷನ್ ನಲ್ಲಿ ಕಳೆದು ಹೋದ ಲಗೇಜ್ ಸಿಗೋದಕ್ಕೂ ಅದೃಷ್ಟ ಮಾಡಿರ್ಬೇಕು ಅನ್ನೋ ಮಾತಿದೆ. ಆದ್ರೆ ಇನ್ಮೇಲೆ ಅದೃಷ್ಟನ ನಂಬಬೇಡಿ ನಮ್ಮನ್ನ ನಂಬಿ ಎನ್ನುತ್ತಿದೆ ರೈಲ್ವೇ ಇಲಾಖೆ.
ಕಾರಣ ಇಷ್ಟೇ, ತನ್ನ ಪ್ರಯಾಣಿಕರು ಕಳೆದುಕೊಂಡ ಲಗೇಜ್ ಗಳನ್ನ ಅವರ ಬಳಿಗೆ ತಲುಪಿಸಲು ಪಶ್ಚಿಮ ರೈಲ್ವೇಯ ಭದ್ರತಾ ಪಡೆ ಹೊಸ ಯೋಜನೆ ಶುರು ಮಾಡಿದೆ.
ರೈಲ್ವೇ ಪ್ರಯಾಣಿಕರ ಮತ್ತು ಅವರ ವಸ್ತುಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಿರೋ, ರೈಲ್ವೇ ಭದ್ರತಾ ಪಡೆ(RPF) “ಮಿಷನ್ ಅಮಾನತ್” ಅನ್ನೋ ಯೋಜನೆಗೆ ಕೈ ಹಾಕಿದೆ. ಇದರ ಮೂಲಕ ಸ್ಟೇಷನ್ ನಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಲಗೇಜ್ ಕಳೆದುಕೊಂಡರೆ ಅವರ ಲಗೇಜನ್ನ ವಾಪಾಸ್ಸು ಮಾಡುವುದನ್ನ ಮಿಷನ್ ಆಗಿಸಿಕೊಂಡಿದೆ.
ರೈಲ್ವೇ ಭದ್ರತಾ ಪಡೆ ಕಳೆದುಹೋದ ವಸ್ತುಗಳ ಫೋಟೊಗಳನ್ನ ತಮ್ಮ ವೆಬ್ಸೈಟ್ ನಲ್ಲಿ (https://wr.indianrailways.gov.in/) ಅಪ್ಲೋಡ್ ಮಾಡುತ್ತದೆ. ನಿಮ್ಮ ಲಗೇಜ್ ಏನಾದರು ಕಳೆದು ಹೋಗಿದ್ದರೆ, ರೈಲ್ವೇ ಇಲಾಖೆಯ ಅಧಿಕೃತ ವೆಬ್ ಪೋರ್ಟಲ್ ನ ಮಿಷನ್ ಅಮಾನತ್ ಲಿಂಕ್ ನಲ್ಲಿ ಮಾಹಿತಿ ಪಡೆಯಬಹುದು.
2021ರ ಜನವರಿ ಒಂದನೇ ತಾರೀಖಿನಿಂದ ವರ್ಷದ ಕೊನೆ ದಿನಾಂಕದವರೆಗೂ 2.58ಕೋಟಿ ಬೆಲೆ ಬಾಳುವ, 1317 ಪ್ರಯಾಣಿಕರ ವಸ್ತುಗಳನ್ನ ರೈಲ್ವೇ ಭದ್ರತಾ ಪಡೆ ಹಿಂತಿರುಗಿಸಿದೆ.
ಪಶ್ಚಿಮ ರೈಲ್ವೇಯ ಭದ್ರತಾ ಪಡೆ ಮಿಷನ್ ಅಮಾನತ್ ಅಡಿಯಲ್ಲಿ ಈ ಸೇವೆಯನ್ನ ಒದಗಿಸುತ್ತಿದೆ. ಈ ಸೇವೆ ರೈಲ್ವೆ ಇಲಾಖೆಯ ಎಲ್ಲಾ ಝೋನ್ ಗಳಿಗೆ ವಿಸ್ತಾರವಾದರೆ ಒಳ್ಳೆಯದು ಎಂದು ಹಲವು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.