ಭಾರತೀಯ ರೈಲ್ವೇ ಬಯೋಮೆಟ್ರಿಕ್ ಟೋಕನ್ ಯಂತ್ರವನ್ನು ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸೇವೆ ಶುರು ಮಾಡಲಾಗಿದೆ. ಈ ಯಂತ್ರವನ್ನು ದಕ್ಷಿಣ ಮಧ್ಯ ರೈಲ್ವೇ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ.
ಜನರಲ್ ಬೋಗಿ ಹತ್ತುವಾಗ ಜನಸಂದಣಿಯಿರುತ್ತದೆ. ಪ್ರಯಾಣಿಕರನ್ನು ನಿಯಂತ್ರಿಸುವುದು ರೈಲ್ವೆ ಆಡಳಿತ ಮಂಡಳಿಗೆ ಕಷ್ಟವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಮಧ್ಯೆ ಎರಡು ಅಡಿ ಅಂತರ ಕಾಯ್ದುಕೊಳ್ಳುವ ಅವಶ್ಯಕತೆಯಿದೆ. ಜನದಟ್ಟಣೆ ಮತ್ತೊಂದು ಅಪಾಯಕ್ಕೆ ಕಾರಣವಾಗುವ ಸಾಧ್ಯತೆಯದೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಬಯೋಮೆಟ್ರಿಕ್ ಟೋಕನ್ ಯಂತ್ರದ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಈ ಯಂತ್ರದಿಂದ ಪ್ರತಿ ಪ್ರಯಾಣಿಕರಿಗೆ ಟೋಕನ್ ಜನರೇಟ್ ಆಗಲಿದೆ. ಇದು ಜನರಲ್ ಬೋಗಿಗೆ ಮಾತ್ರ ಅನ್ವಯವಾಗಲಿದೆ. ಟೋಕನ್ ಪಡೆದ ಪ್ರಯಾಣಿಕರು ತಮ್ಮ ನಂಬರ್ ಬಂದಾಗ ರೈಲು ಏರುತ್ತಾರೆ.
ಸಾಮಾನ್ಯವಾಗಿ ಜನರಲ್ ಬೋಗಿ ಏರುವ ವೇಳೆ ಗಲಾಟೆ, ಜಗಳಗಳು ನಡೆಯುತ್ತವೆ. ಇದನ್ನು ತಪ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ನೆರವಾಗಲಿದೆ.
ಈ ಯಂತ್ರವು ಪ್ರತಿ ಪ್ರಯಾಣಿಕರ ಹೆಸರು, ಪಿಎನ್ಆರ್ ಸಂಖ್ಯೆ, ರೈಲು ಸಂಖ್ಯೆ ಮತ್ತು ಇಳಿಯುವ ಜಾಗದ ದಾಖಲೆ ಇಟ್ಟಿರುತ್ತದೆ. ಪ್ರಯಾಣಿಕರು ಮೊದಲು ಮೇಲಿನ ಮಾಹಿತಿ ನೀಡಬೇಕು. ನಂತ್ರ ಫೋಟೋ ತೆಗೆಯಲಾಗುತ್ತದೆ. ಬೆರಳಚ್ಚನ್ನು ಮುದ್ರಿಸಬೇಕಾಗುತ್ತದೆ. ನಂತ್ರ ಬಯೋಮೆಟ್ರಿಕ್ ಯಂತ್ರ, ಟೋಕನ್ ನೀಡುತ್ತದೆ. ಈ ಟೋಕನ್ನಲ್ಲಿ ಸಂಖ್ಯೆ ಮತ್ತು ಕೋಚ್ ಸಂಖ್ಯೆ ಇರುತ್ತದೆ. ಪ್ರಯಾಣಿಕನು ಕೋಚ್ ಸಂಖ್ಯೆಗೆ ಅನುಗುಣವಾಗಿ ರೈಲಿನ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.
ಬಯೋಮೆಟ್ರಿಕ್ ಟೋಕನ್ ಯಂತ್ರದ ಒಂದು ಪ್ರಮುಖ ಪ್ರಯೋಜನವೆಂದರೆ ರೈಲಿನಲ್ಲಿ ಪ್ರಯಾಣಿಕರ ಅಪರಾಧ ಕೃತ್ಯಗಳನ್ನು ತಡೆಯಬಹುದು. ರೈಲ್ವೆಯು ಪ್ರತಿಯೊಬ್ಬ ಪ್ರಯಾಣಿಕರ ವಿವರಗಳನ್ನು ಹೊಂದಿರುವುದರಿಂದ, ಯಾವುದೇ ಅಪರಾಧ ನಡೆದರೆ ಅದನ್ನು ಸುಲಭವಾಗಿ ಪತ್ತೆ ಮಾಡಬಹುದು. ಫೋಟೋ ಮತ್ತು ಬೆರಳಚ್ಚುಗಳನ್ನು ಬಯೋಮೆಟ್ರಿಕ್ ಯಂತ್ರದಲ್ಲಿ ಸಂಗ್ರಹವಾಗುತ್ತದೆ ಎಂಬ ಭಯದಿಂದ ಜನರು ಕ್ರಿಮಿನಲ್ ಕೆಲಸ ಮಾಡಲು ಭಯಪಡ್ತಾರೆ.
ದಕ್ಷಿಣ ಮಧ್ಯ ರೈಲ್ವೆಯ ಪ್ರಕಾರ, ಬಯೋಮೆಟ್ರಿಕ್ ಯಂತ್ರದ ದೊಡ್ಡ ಅನುಕೂಲವೆಂದರೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಪ್ಪಿಸುವುದು. ಪ್ರಯಾಣಿಕರು ಮುಂಚಿತವಾಗಿ ಕೋಚ್ ಸಂಖ್ಯೆಯನ್ನು ಪಡೆಯುವುದರಿಂದ, ಅವರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ರೈಲು ಹತ್ತಲು ಕಾಯಬೇಕಾಗಿಲ್ಲ. ಬಯೋಮೆಟ್ರಿಕ್ ಯಂತ್ರದ ಮೂಲಕ, ಯಾವ ಕೋಚ್ ನಲ್ಲಿ ಕುಳಿತುಕೊಳ್ಳಬೇಕು ಎಂದು ಟೋಕನ್ ತೆಗೆದುಕೊಂಡ ನಂತ್ರ ತಿಳಿಯುತ್ತದೆ. ಒಮ್ಮೆ ಪ್ರಯಾಣಿಕರಿಗೆ ಟೋಕನ್ ಸಿಕ್ಕರೆ, ರೈಲು ಹೊರಡುವ 15 ನಿಮಿಷಗಳ ಮೊದಲು ಪ್ಲಾಟ್ಫಾರ್ಮ್ಗೆ ಬಂದರೆ ಸಾಕಾಗುತ್ತದೆ. ಆರಾಮವಾಗಿ ಬೋಗಿಗೆ ಹೋಗಬಹುದು. ಟೋಕನ್ ಯಂತ್ರವು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನ ಅಗತ್ಯತೆ ಮತ್ತು ಕೆಲಸವನ್ನು ಕಡಿಮೆ ಮಾಡುತ್ತದೆ.
ಬಯೋಮೆಟ್ರಿಕ್ ಯಂತ್ರವನ್ನು ಮೊದಲ ಬಾರಿ ಸೆಪ್ಟೆಂಬರ್ 14, 2021 ರಂದು ಪ್ರಾರಂಭಿಸಲಾಯಿತು. ಶೀಘ್ರದಲ್ಲೇ ಸಿಕಂದರಾಬಾದ್ ನಿಲ್ದಾಣದಲ್ಲಿ ಮತ್ತೊಂದು ಬಯೋಮೆಟ್ರಿಕ್ ಯಂತ್ರವನ್ನು ಸ್ಥಾಪಿಸಲಾಗುವುದು.