ನವದೆಹಲಿ: ರೈಲು ಅಪಘಾತ ತಡೆಯುವ ಉದ್ದೇಶದಿಂದ ರೂಪಿಸಲಾದ ಕವಚ್ ಸ್ವಯಂ ಚಾಲಿತ ರಕ್ಷಣಾ ವ್ಯವಸ್ಥೆ ದೇಶಾದ್ಯಂತ ಅಳವಡಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಅನುದಾನದ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, ಕವಚ್ ಅಳವಡಿಕೆಯಲ್ಲಿ ಯಾವುದೇ ಪ್ರಯತ್ನ ಬಿಡುವುದಿಲ್ಲ. ಪ್ರಯಾಣಿಕರ ಸುರಕ್ಷತೆ ಖಾತ್ರಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಣ್ಣ ರೈಲ್ವೆ ಜಾಲಗಳನ್ನು ಹೊಂದಿರುವ ದೇಶಗಳು ಸಹ ಕವಚ್ ಅಳವಡಿಸಲು 20 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿವೆ ಎಂದು ಹೇಳಿದ ಸಚಿವರು, ಇಂತಿಷ್ಟೇ ಕಾಲಮಿತಿಯಲ್ಲಿ ರೈಲ್ವೆ ಜಾಲದಲ್ಲಿ ಕವಚ್ ಅಳವಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲಿಲ್ಲ.
ಕವಚವು ತಾಂತ್ರಿಕವಾಗಿ ಸುಧಾರಿತ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯಾಗಿದ್ದು, ನಿರ್ದಿಷ್ಟ ವೇಗದ ಮಿತಿಗಳನ್ನು ಅನುಸರಿಸಲು ಲೊಕೊ ಪೈಲಟ್‌ಗೆ ಸಹಾಯ ಮಾಡುತ್ತದೆ ಎಂದು ವೈಷ್ಣವ್ ವಿವರಿಸಿದರು.
ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ 139 ಇಂಜಿನ್‌ಗಳೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯಾದ ಕವಚವನ್ನು ಅಳವಡಿಸಲಾಗಿದೆ ಎಂದು ಕಾಂಗ್ರೆಸ್ ಸಂಸದರಾದ ಬೆನ್ನಿ ಬೆಹನನ್ ಮತ್ತು ಕುಂಬಕುಡಿ ಸುಧಾಕರನ್ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.