ಚೆನ್ನೈನ ತಲೈವಾ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣವು ಪರಿಸರ-ಸ್ನೇಹಿ ನಿಲ್ದಾಣಗಳ ಸಾಲಿಗೆ ಸೇರಿದೆ.
1.5 ಮೆ.ವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೋಲಾರ್ ಫಲಕಗಳನ್ನು ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಇದರಿಂದ ಹಗಲಿನ ವೇಳೆ ನಿಲ್ದಾಣದ ವಿದ್ಯುತ್ ಅಗತ್ಯತೆ 100% ರಷ್ಟನ್ನು ಸೌರ ವಿದ್ಯುತ್‌ನಿಂದಲೇ ಪೂರೈಸಲಾಗುತ್ತಿದೆ. ಈ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
’ಹಸಿರು ಸಾರಿಗೆ’ಯಾಗುವ ಗುರಿಯಲ್ಲಿ, ರೈಲ್ವೇ ಇಲಾಖೆಯು ತನ್ನ ವಿದ್ಯುತ್ ಅಗತ್ಯತೆಗಳನ್ನು ಸೌರ ಮೂಲದಿಂದ ಪೂರೈಸಿಕೊಳ್ಳಲು ಯತ್ನಿಸಲಿದೆ ಎಂದು ಸಚಿವಾಲಯವು ತಿಂಗಳುಗಳ ಹಿಂದೆ ತಿಳಿಸಿತ್ತು.
ಭಾರತಿಯ ರೈಲ್ವೇಗೆ ಸೇರಿದ ಖಾಲಿ ಜಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಸೌರ ಫಲಕಗಳನ್ನು ಅಳವಡಿಸಲು ರೈಲ್ವೇ ಸಚಿವಾಲಯ ನಿರ್ಣಯಿಸಿದೆ. ರೈಲ್ವೇ ಜಾಲದಿಂದ ಹೊರಸೂಸುವ ಇಂಗಾಲದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯಿಂದ ಸಾಧ್ಯವಾದಷ್ಟು ಹೆಚ್ಚಿನ ಮಟ್ಟದಲ್ಲಿ ಸೌರ ವಿದ್ಯುತ್ ಅವಲಂಬನೆಗೆ ಇಲಾಖೆ ಮುಂದಾಗಿದೆ.
ರಾಯ್ ಬರೇಲಿ ಮಾಡರ್ನ್ ಕೋಚ್ ಕಾರ್ಖಾನೆಯಲ್ಲಿ 3 ಮೆ.ವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೌರ ವ್ಯವಸ್ಥೆ ರಚಿಸಿರುವ ರೈಲ್ವೇ, ತನ್ನ ಅನೇಕ ನಿಲ್ದಾಣಗಳ ಛಾವಣಿಗಳ ಮೇಲೆ ಸೌರ ಫಲಕಗಳ ಅಳವಡಿಕೆಯಿಂದ 100 ಮೆ.ವ್ಯಾ.ನಷ್ಟು ವಿದ್ಯುತ್ ಅನ್ನು ಅದಾಗಲೇ ಉತ್ಪಾದನೆ ಮಾಡಲಾಗುತ್ತಿದೆ.
ಮಧ್ಯ ಪ್ರದೇಶದ ಬಿನಾದಲ್ಲಿ 1.7 ಮೆ.ವ್ಯಾ.ನಷ್ಟು ಸೌರ ವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗಿದ್ದು, ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ನೇರವಾಗಿ ರೈಲ್ವೇ ಮಾರ್ಗಗಳ ಮೇಲಿನ ವಿದ್ಯುತ್ ಜಾಲಕ್ಕೆ ಸಂಪರ್ಕಿಸಲಾಗುವುದು.
ಬಿಎಚ್‌ಇಎಲ್ ಸಹಯೋಗದೊಂದಿಗೆ ರೈಲ್ವೇ ಇಲಾಖೆಯು ಈ ಅಭಿಯಾನಕ್ಕೆ ಮುಂದಾಗಿದ್ದು, ಜಗತ್ತಿನಲ್ಲೇ ರಾಷ್ಟ್ರೀಯ ಸಾರಿಗೆ ಜಾಲವೊಂದು ರಚಿಸಿರುವ ಈ ರೀತಿಯ ಅತಿ ದೊಡ್ಡ ಅಭಿಯಾನ ಇದಾಗಿದೆ.