ಸಾಮಾನ್ಯವಾಗಿ ನಿಗದಿತ ರೈಲು ಸಂಚಾರ ರದ್ದಾದರೆ ಅಥವಾ ಬಸ್ ಅಥವಾ ವಿಮಾನ ರದ್ದಾದರೆ ಟಿಕೆಟ್ ಹಣವನ್ನು ವಾಪಸ್ ಕೊಡುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಬಸ್ ಸಂಚಾರ ರದ್ದಾದರೆ ಮತ್ತೊಂದು ಬಸ್ ನಲ್ಲಿ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತದೆ.
ಆದರೆ, ಇಲ್ಲೊಂದು ಪ್ರಕರಣದ ಬಗ್ಗೆ ತಿಳಿದರೆ ನೀವು ಆಶ್ಚರ್ಯಪಡುವುದರ ಜೊತೆಗೆ ಅಧಿಕಾರಿಗಳ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೀರಿ.
ಅದೆಂದರೆ, ರೈಲು ಸಂಚಾರ ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರೊಬ್ಬರಿಗೆ ಪ್ರತ್ಯೇಕ ಕಾರನ್ನು ಬಾಡಿಗೆ ಮಾಡಿ ಮುಂದಿನ ರೈಲು ನಿಲ್ದಾಣಕ್ಕೆ ತಲುಪಿಸಿದ ರೈಲ್ವೆ ಅಧಿಕಾರಿಗಳ ಸೇವೆ ಇದು.
ಐಐಟಿ ಮದ್ರಾಸ್ ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಏಕ್ತಾನಗರದಿಂದ ವಡೋದರ ರೈಲು ನಿಲ್ದಾಣಕ್ಕೆ ಪ್ರಯಾಣಿಸಿ ಅಲ್ಲಿಂದ ಮತ್ತೊಂದು ರೈಲನ್ನು ಹಿಡಿದು ಚೆನ್ನೈಗೆ ಪ್ರಯಾಣಿಸಬೇಕಿತ್ತು. ಆದರೆ, ಮಳೆ ಮತ್ತಿತರೆ ಕಾರಣದಿಂದ ನಿಗದಿತ ರೈಲು ಸಂಚಾರವನ್ನು ರದ್ದು ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿ ವಡೋದರಕ್ಕೆ ಹೋಗಿ ಅಲ್ಲಿಂದ ಚೆನ್ನೈ ರೈಲು ಹಿಡಿಯುವುದು ಕಷ್ಟಕರವಾಗಿತ್ತು.
ಇದನ್ನು ಮನಗಂಡ ಭಾರತೀಯ ರೈಲ್ವೆ ಅಧಿಕಾರಿಗಳು ಕಾರೊಂದು ಬಾಡಿಗೆ ಪಡೆದು ವಿದ್ಯಾರ್ಥಿಯನ್ನು ವಡೋದರ ರೈಲು ನಿಲ್ದಾಣಕ್ಕೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿ ಸತ್ಯಂ ಗಾಧ್ವಿ, ನಾನು ಪ್ರಯಾಣಿಸಬೇಕಿದ್ದ ರೈಲು ರದ್ದಾದ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ನನಗಾಗಿಯೇ ಪ್ರತ್ಯೇಕ ಕಾರನ್ನು ಬಾಡಿಗೆ ಪಡೆದು ಅದರಲ್ಲಿ ನನ್ನನ್ನು ವಡೋದರಗೆ ಕಳುಹಿಸಿಕೊಡುವ ಮೂಲಕ ಪ್ರಯಾಣಿಕರ ಬಗ್ಗೆ ಅವರು ತೋರಿದ ಕಾಳಜಿ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.