ಪ್ರಯಾಣಿಕರಲ್ಲಿ ಗಮನಕ್ಕೆ….! ನೀವು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ರಾತ್ರಿ 10 ಗಂಟೆಯ ನಂತರ ಗಟ್ಟಿ ಧ್ವನಿಯಲ್ಲಿ ಮಾತನಾಡುವುದಾಗಲೀ, ಇಯರ್ ಫೋನ್ ಇಲ್ಲದೇ ನಿಮ್ಮ ಮೊಬೈಲ್ ಕಿವಿಗಡಚಿಕ್ಕುವಂತೆ ಸೌಂಡ್ ಕೊಟ್ಟು ಸಂಗೀತ ಕೇಳುವುದಾಗಲೀ, ಮತ್ತೊಬ್ಬರಿಗೆ ಕಿರಿಕಿರಿ ಉಂಟಾಗುವಂತೆ ಏರಿದ ಧ್ವನಿಯಲ್ಲಿ ಫೋನ್ ನಲ್ಲಿ ಮಾತನಾಡುವಂತಿಲ್ಲ.
ಈ ಎಲ್ಲಾ `ಕಿರಿಕಿರಿ’ ತರುವಂತಹ ಚಟುವಟಿಕೆಗಳನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ರಾತ್ರಿ ಪ್ರಯಾಣದ ವೇಳೆ ಸಹ ಪ್ರಯಾಣಿಕರು ಮೊಬೈಲ್ ನಲ್ಲಿ ಗಟ್ಟಿಯಾಗಿ ಮಾತನಾಡುತ್ತಾರೆ, ಮೊಬೈಲ್ ನಲ್ಲಿ ಹೆಚ್ಚು ಸೌಂಡ್ ಕೊಟ್ಟು ಸಂಗೀತ ಆಲಿಸುತ್ತಾರೆ ಎಂದೆಲ್ಲಾ ಪ್ರಯಾಣಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ, ಸುಖಕರ ಮತ್ತು ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಈ ನಿಷೇಧ ಹೇರಿದೆ.
ಉದ್ಯೋಗಿಗಳಿಗೆ EPFO ಮಹತ್ವದ ಮಾಹಿತಿ
ಈ ಸಂಬಂಧ ಇಲಾಖೆಯು ತನ್ನೆಲ್ಲಾ ರಾಜ್ಯ ಘಟಕಗಳ ಕಚೇರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳ ಪ್ರಕಾರ, ಈ ಕಿರಿಕಿರಿಗಳ ಬಗ್ಗೆ ಪ್ರಯಾಣಿಕರು ದೂರು ನೀಡಿದರೆ, ರೈಲಿನಲ್ಲಿರುವ ಸಿಬ್ಬಂದಿ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರಯಾಣಿಕರ ಸುರಕ್ಷತೆಗೆಂದು ರೈಲಿನಲ್ಲಿ ಕರ್ತವ್ಯ ನಿಭಾಯಿಸುವ ರೈಲ್ವೆ ತಪಾಸಣೆ ಸಿಬ್ಬಂದಿ, ರೈಲ್ವೆ ಭದ್ರತಾ ಸಿಬ್ಬಂದಿ, ನಿರ್ವಹಣೆ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸಿಬ್ಬಂದಿ ವರ್ಗದವರೂ ಸಹ ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೈಜೋಡಿಸಬೇಕು.
ಯಾವುದೇ ಪ್ರಯಾಣಿಕನು ಮೊಬೈಲ್ ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ ಮತ್ತು ದೊಡ್ಡ ಮಟ್ಟದ ಸೌಂಡ್ ಕೊಟ್ಟು ಸಂಗೀತ ಕೇಳಲು ಅವಕಾಶ ನೀಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.