ನವದೆಹಲಿ: ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೇ 261 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದೆ. ವಿಶೇಷ ದರದಲ್ಲಿ ವಿವಿಧ ಸ್ಥಳಗಳಿಗೆ ಈ ರೈಲುಗಳು ಸಂಚರಿಸಲಿವೆ.
ಸೆಂಟ್ರಲ್ ರೈಲ್ವೇ 201 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದ್ದು, ಪಶ್ಚಿಮ ರೈಲ್ವೇ 42 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಕೆಆರ್‌ಸಿಎಲ್ 18 ಗಣಪತಿ ವಿಶೇಷ ರೈಲುಗಳನ್ನು ಬಿಡುವುದಾಗಿ ತಿಳಿಸಿದೆ. ಈ ರೈಲುಗಳು ಈಗಾಗಲೇ ಆಗಸ್ಟ್ ಕೊನೆಯ ವಾರದಿಂದ ಸೇವೆಗಳನ್ನು ಆರಂಭಿಸಿವೆ. ಸೆಪ್ಟೆಂಬರ್ 20, 2021 ರ ವರೆಗೆ ಸಂಚರಿಸುತ್ತವೆ ಎಂದು ಹೇಳಲಾಗಿದೆ.
ಅಲ್ಲದೆ, ಗಣಪತಿ ಉತ್ಸವ -2021 ರ ಸಮಯದಲ್ಲಿ ರಶ್ ತಪ್ಪಿಸಲು ಮುಂಬೈನಿಂದ ಹೊರಡುವ ವಿವಿಧ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಕೋಚ್ ಹೆಚ್ಚಿಸಲಾಗಿದೆ. ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಈಗಿರುವ 22 ಕೋಚ್‌ಗಳ ಜೊತೆಗೆ ಸೇರಿಸಲಾಗಿದೆ. 24 ಬೋಗಿಗಳೊಂದಿಗೆ ಸಂಚರಿಸಲಿರುವ ವಿಶೇಷ ರೈಲುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.
ರೈಲುಗಳ ಸಮಯ ಮತ್ತು ನಿಲುಗಡೆಗೆ ಸಂಬಂಧಿಸಿದ ವಿವರವಾದ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ತಾಣಗಳಾದ www.enquiry.indianrail.gov.in ಗೆ ಭೇಟಿ ನೀಡಬಹುದು ಎಂದು ಹೇಳಲಾಗಿದೆ.