
ಚೆನ್ನೈ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಓವರ್ ಸೀಸ್ ಬ್ಯಾಂಕ್(ಐಒಬಿ) ಗ್ರಾಹಕರಿಗೆ ಆಧಾರ್ ಒಟಿಪಿ ಮೂಲಕ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಕಲ್ಪಿಸಲಾಗಿದೆ.
ಕಾರ್ಪೊರೇಟ್ ವಲಯದ ಗ್ರಾಹಕರ ಅನುಕೂಲಕ್ಕಾಗಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(ಎಪಿಐ) ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ
ಇಂಡಿಯನ್ ಓವರ್ಸೀಸ್ ಬ್ಯಾಂಕ್ 89ನೇ ಸಂಸ್ಥಾಪನಾ ದಿನಾಚರಣೆಯ ಸಂಭ್ರಮದಲ್ಲಿದ್ದು, ಇದರ ಬೆನ್ನಲ್ಲೇ ಗ್ರಾಹಕರಿಗೆ ಅನೇಕ ಸೌಲಭ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರು ಬ್ಯಾಂಕಿನ ವೆಬ್ಸೈಟ್ ಗೆ ಹೋಗಿ ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದನ್ನು ಬಳಸಿಕೊಂಡು ಖಾತೆ ತೆರೆಯಬಹುದಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಆರ್ಬಿಐ ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಮಾರ್ಗಸೂಚಿಗಳ ಅನ್ವಯ ಈ ಸೌಲಭ್ಯ ಕಲ್ಪಿಸಲಾಗಿದ್ದು, ಯಾವುದೇ ತೊಂದರೆ ಇಲ್ಲದೆ ಗ್ರಾಹಕರು ಖಾತೆ ತೆರೆಯಬಹುದಾಗಿದೆ. ಇದಕ್ಕೆ ಹೆಚ್ಚಿನ ದಾಖಲೆ ಸಲ್ಲಿಸುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.