ಇಂಡಿಯನ್ ಆಯಿಲ್ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸಂತೋಷದ ಸುದ್ದಿಯೊಂದಿದೆ. ಸಿಲಿಂಡರ್ ಜೊತೆ ಇನ್ಮುಂದೆ ನೀವು ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಮಾರುಕಟ್ಟೆಗೆ ಹೋಗಿ ನೀವು ವಸ್ತುಗಳ ಖರೀದಿ ಮಾಡ್ಬೇಕಾಗಿಲ್ಲ. ನಿಮ್ಮ ಮನೆಗೇ ಸಿಲಿಂಡರ್ ನೀಡಲು ಬಂದ ವ್ಯಕ್ತಿ, ಸಾಮಗ್ರಿಗಳನ್ನು ನೀಡುತ್ತಾರೆ.
ಹೌದು, ಎಫ್ಎಂಸಿಜಿ ಉತ್ಪನ್ನ ತಯಾರಕ ಡಾಬರ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಗ್ಯಾಸ್ ಸಿಲಿಂಡರ್ ವಿತರಕರು, ಡಾಬರ್ ಉತ್ಪನ್ನಗಳನ್ನೂ ನಿಮ್ಮ ಮನೆಗೆ ತಲುಪಿಸಲಿದ್ದಾರೆ.
ಡಾಬರ್ ಮತ್ತು ಇಂಡಿಯನ್ ಆಯಿಲ್ ಬುಧವಾರ ಹೊರಡಿಸಿದ ಹೇಳಿಕೆ ಪ್ರಕಾರ, ಇಂಡೇನ್ ಎಲ್ಪಿಜಿಯ ಸುಮಾರು 140 ಮಿಲಿಯನ್ ಗ್ರಾಹಕರು ದೇಶಾದ್ಯಂತ ವಿವಿಧ ರೀತಿಯ ಡಾಬರ್ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ.
ಡಾಬರ್ ಉತ್ಪನ್ನಗಳನ್ನು ಮನೆ ಮನೆಗೆ ತಲುಪಿಸಲು ಕಂಪನಿ ಈ ಒಪ್ಪಂದ ಮಾಡ್ಕೊಂಡಿದೆ. ಇಂಡಿಯನ್ ಆಯಿಲ್ 12,750 ಇಂಡೇನ್ ವಿತರಕರು ಮತ್ತು 90,000 ಕ್ಕೂ ಹೆಚ್ಚು ವಿತರಣಾ ಕೆಲಸಗಾರರನ್ನು ಹೊಂದಿದೆ. ಈ ಸಿಬ್ಬಂದಿ ಡಾಬರ್ ವಸ್ತುಗಳನ್ನು ಮನೆಗೆ ತಲುಪಿಸಲು ನೆರವಾಗಲಿದ್ದಾರೆ. ಹೆಚ್ಚಿನ ಭಾರತೀಯ ಕುಟುಂಬಗಳಿಗೆ ಇಂಡಿಯನ್ ಆಯಿಲ್ ತಲುಪುವುದರಿಂದ ಡಾಬರ್ ಗೆ ಪ್ರಯೋಜನವಾಗಲಿದೆ ಎಂದು ಕಂಪನಿ ಹೇಳಿದೆ.