
ಅಮೆರಿಕಾದ ವರ್ಜೀನಿಯಾದಲ್ಲಿ ನಡೆದ ಭೀಕರ ಘಟನೆಯಲ್ಲಿ ಗುಜರಾತ್ ಮೂಲದ ತಂದೆ ಮತ್ತು ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 24 ವರ್ಷದ ಯುವತಿ ಮತ್ತು 56 ವರ್ಷದ ಆಕೆಯ ತಂದೆ, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಗುರುವಾರ ಬೆಳಿಗ್ಗೆ ಅಂಗಡಿ ತೆರೆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ವರದಿಯ ಪ್ರಕಾರ, ಆರೋಪಿ ಗುರುವಾರ ಬೆಳಿಗ್ಗೆ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದನು. ಅಂಗಡಿ ರಾತ್ರಿ ಮುಚ್ಚಿರುವುದನ್ನು ತಿಳಿದು ಕೋಪಗೊಂಡ ಆರೋಪಿ ತಂದೆ – ಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪ್ರದೀಪ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಮಗಳು ಊರ್ಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಾಬೆನ್ ಮತ್ತು ಮಗಳು ಊರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾಗಿದ್ದು, ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅವರು ಸಂಬಂಧಿ ಪರೇಶ್ ಪಟೇಲ್ ಒಡೆತನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರದೀಪ್ ಪಟೇಲ್ ಮತ್ತು ಹಂಸಾಬೆನ್ ಅವರಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬರು ಕೆನಡಾದಲ್ಲಿ ಮತ್ತು ಇನ್ನೊಬ್ಬರು ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.
ಆರೋಪಿ ವಾರ್ಟನ್ ವಿರುದ್ಧ ಮೊದಲ ದರ್ಜೆಯ ಕೊಲೆ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ. ಈ ಜೋಡಿ ಕೊಲೆ ಅಮೆರಿಕಾದಲ್ಲಿನ ಭಾರತೀಯ ಸಮುದಾಯವನ್ನು ಆಘಾತಗೊಳಿಸಿದೆ. ಇತ್ತೀಚೆಗೆ ಉತ್ತರ ಕೆರೊಲಿನಾದಲ್ಲಿ ಮೈನಾಂಕ್ ಪಟೇಲ್ ಎಂಬ ಭಾರತೀಯ ಮೂಲದ ಅಂಗಡಿ ಮಾಲೀಕರನ್ನು ದರೋಡೆ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.