ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮುಂದೆ ಭಾರತದ ಬಾವುಟ ಕೆಳಗಿಳಿಸಿ ಖಲಿಸ್ತಾನಿ ಬಾವುಟ ಹಾರಿಸಲು ಯತ್ನಿಸಿದ ಬೆನ್ನಲ್ಲೇ ಭಾರತೀಯ ಪತ್ರಕರ್ತನ ಮೇಲೆ ಹಲ್ಲೆಯಾಗಿರೋ ಆರೋಪ ಕೇಳಿಬಂದಿದೆ.
ವಾಷಿಂಗ್ಟನ್ ನಲ್ಲಿ ನೆಲೆಸಿರುವ ಭಾರತೀಯ ಪತ್ರಕರ್ತರೊಬ್ಬರು, ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಖಲಿಸ್ತಾನಿ ಪರ ಪ್ರತಿಭಟನಾಕಾರರು ತಮ್ಮ ಮೇಲೆ ದೈಹಿಕವಾಗಿ ದಾಳಿ ಮಾಡಿದ್ದಾರೆ ಮತ್ತು ಮಾತಿನಲ್ಲಿ ನಿಂದಿಸಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ ಲಲಿತ್ ಝಾ ಅವರು ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಖಲಿಸ್ತಾನಿ ಪರ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಖಾಲಿಸ್ತಾನಿ ಬೆಂಬಲಿಗರು ತನ್ನ ಎಡ ಕಿವಿಗೆ ಕೋಲುಗಳಿಂದ ಹೊಡೆದಿದ್ದಾರೆ ಎಂದು ಪತ್ರಕರ್ತ ಹೇಳಿಕೊಂಡಿದ್ದಾರೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಖಲಿಸ್ತಾನಿ ಬೆಂಬಲಿಗರ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ತಮ್ಮನ್ನು ಅಲ್ಲಿಂದ ರಕ್ಷಿಸಲು ಸಹಾಯ ಮಾಡಿದ ಅಮೆರಿಕಾದ ರಹಸ್ಯ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಂಡನ್‌ನಲ್ಲಿರುವ ಭಾರತೀಯ ಮಿಷನ್‌ಗಳ ಮೇಲೆ ಖಲಿಸ್ತಾನಿ ಬೆಂಬಲಿಗರ ದಾಳಿ ಬಳಿಕ ಈ ಘಟನೆ ನಡೆದಿದೆ. ಖಾಲಿಸ್ತಾನ್ ಪರ ಪ್ರತಿಭಟನಾಕಾರರ ಗುಂಪೊಂದು ಕಳೆದ ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು.