
ಬಿಗ್ ಬ್ಯಾಷ್ ಲೀಗ್ (BBL) ಪಂದ್ಯದ ವೇಳೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತೀಯ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಪೋಸ್ ಮಾಡ್ತಿದ್ದಂತೆ ಯುವತಿ ಅಚ್ಚರಿಗೊಂಡು ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು ಸಂತಸ ಪಟ್ಟಿದ್ದಾರೆ.
ಪಂದ್ಯದ ವೇಳೆ ಸಂದರ್ಶಕರೊಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕ್ರಿಕೆಟ್ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುತ್ತಾರೆ. ಬೇರೆ ಬೇರೆ ತಂಡಗಳ ಟೀ ಶರ್ಟ್ ಧರಿಸಿದ್ದ ಯುವಜೋಡಿಯನ್ನ ಸಂದರ್ಶಕ ಮಾತನಾಡಿಸುತ್ತಾ, ನೀವಿಬ್ಬರೂ ಪ್ರತಿಸ್ಪರ್ಧಿ ತಂಡಗಳನ್ನು ಬೆಂಬಲಿಸುವ ನಡೆಯಿಂದ ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಉಂಟುಮಾಡಿದೆಯೇ ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಉತ್ತರಿಸಿದ ಯುವಕ “ಹೌದು, ನಾನು ಬಿಗ್ ಸ್ಟಾರ್ಸ್ ಅಭಿಮಾನಿ ಮತ್ತು ಅವಳು ರೆನೆಗೇಡ್ಸ್ ಅಭಿಮಾನಿ. ಆದರೆ ಅವಳು ಮ್ಯಾಕ್ಸ್ವೆಲ್ ಅನ್ನು ಪ್ರೀತಿಸುತ್ತಾಳೆ ಮತ್ತು ನಾನು ಮ್ಯಾಕ್ಸ್ವೆಲ್ ಅಭಿಮಾನಿಯಾಗಿದ್ದೇನೆ. ಹಾಗಾಗಿ ನಾನು ಅವಳನ್ನು ಇಲ್ಲಿಗೆ ಕರೆತಂದಿದ್ದೇನೆ” ಎಂದು ಹೇಳುತ್ತಾರೆ. ಮರುಕ್ಷಣವೇ ಇದನ್ನೆಲ್ಲಾ ಗಮನಿಸುತ್ತಿದ್ದ ಯುವತಿಯ ಕಡೆಗೆ ತಿರುಗಿ ಮೊಣಕಾಲಿನ ಮೇಲೆ ಕುಳಿತು ಉಂಗುರವನ್ನು ಹೊರತೆಗೆದು ಪ್ರಪೋಸ್ ಮಾಡುತ್ತಾನೆ.
“ಇದು ಅತಿ ದೊಡ್ಡ ಸಂದರ್ಭವಾಗಿದೆ ಆದ್ದರಿಂದ ನಾನು ಅವಳಿಗೆ ಉಂಗುರವನ್ನು ಹಾಕಲು ಬಯಸುತ್ತೇನೆ.” ಎಂದು ಯುವಕ ಹೇಳುತ್ತಿದ್ದಂತೆ ಜನಸಂದಣಿಯಿಂದ ಜೋರಾಗಿ ಹರ್ಷೋದ್ಗಾರ ಕೇಳಿಬಂದಿತು. ಅನಿರೀಕ್ಷಿತ ಘಟನೆಯಿಂದ ಅಚ್ಚರಿಗೊಂಡ ಯುವತಿ ಪ್ರೇಮನಿವೇದನೆಯನ್ನು ಒಪ್ಪಿಕೊಂಡು ಕೈ ಬೆರಳಿಗೆ ಉಂಗುರ ಹಾಕಿಸಿಕೊಳ್ಳುತ್ತಾಳೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರೆಲ್ಲಾ ಯುವಜೋಡಿಯನ್ನು ಹುರಿದುಂಬಿಸಿದರೆ ಸಂದರ್ಶಕ ಅದ್ಭುತ ಎಂದು ಉದ್ಗರಿಸುತ್ತಾರೆ.
7ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೊ1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಕಮೆಂಟ್ ವಿಭಾಗದಲ್ಲಿ ನೆಟ್ಟಿಗರು, ಹೊಸ ವರ್ಷದ ಅತ್ಯುತ್ತಮ ಆರಂಭ, ಜೀವನದುದ್ದಕ್ಕೂ ನೆನಪಿಡುವ ಕ್ಷಣ ಎಂದೆಲ್ಲಾ ಬಣ್ಣಿಸಿದ್ದಾರೆ.