ಅಮೇರಿಕಾ-ಕೆನಡಾ ಬಾರ್ಡರ್ ನಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ವಿಪರೀತ ಚಳಿಯಿಂದ ತಂದೆ-ತಾಯಿ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ನಾಲ್ವರು ಮಂದಿ ಅಕ್ರಮವಾಗಿ ಕೆನಡಾದ ಗಡಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ಬರುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಇವರ ಮೃತದೇಹ ಕೆನಡಾದ ಗಡಿಯಲ್ಲಿರುವ ಎಮರ್ಸನ್ ಎನ್ನುವ ನಗರದಲ್ಲಿ ಪತ್ತೆಯಾಗಿದ್ದು, ಇವರು ಸಾವನ್ನಪ್ಪಿರುವ ಸಂದರ್ಭದಲ್ಲಿ ಆ ಭಾಗದ ತಾಪಮಾನ -35ಡಿಗ್ರಿಯಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೆನಡಾ ಪೊಲೀಸರು ಸತ್ತ ನಾಲ್ವರಲ್ಲಿ ಪುಟ್ಟ ಮಗುವೊಂದು ಇತ್ತು ಎಂದಿದ್ದಾರೆ. ಮೈನಸ್ ತಾಪಮಾನದಲ್ಲಿ ಹಗಲು ರಾತ್ರಿಯೆನ್ನದೆ ನಡೆದು ನಡೆದು ಸುಸ್ತಾಗಿ ಇವರು ಸಾವನ್ನಪ್ಪಿದ್ದಾರೆ ಎಂದು ಕೆನಡಾ ಪೊಲೀಸರು ಖಚಿತಪಡಿಸಿದ್ದಾರೆ.
ಇವರು ಭಾರತೀಯರು ಎಂದು ಖಚಿತವಾದ ಮೇಲೆ ಕೆನಡಾದ ಭಾರತೀಯ ಹೈ ಕಮಿಷನರ್ ಈ ಘಟನೆಯನ್ನ ಅತ್ಯಂತ ಧಾರುಣ ಎಂದಿದ್ದಾರೆ. ಜೊತೆಗೆ ನಮ್ಮ ತಂಡವು ಸಹಾಯ ಮಾಡಲು ಘಟನಾ ಸ್ಥಳಕ್ಕೆ ಹೋಗಿದೆ. ಘಟನೆಯ ಸಂಪೂರ್ಣ ತನಿಖೆಯಲ್ಲಿ ಕೆನಡಾ ಅಧಿಕಾರಿಗಳೊಂದಿಗೆ ನಾವು ಇರುತ್ತೇವೆ ಎಂದು ಹೈ ಕಮಿಷನರ್ ವಿಜಯ್ ಬಿಸಾರಿಯ ಟ್ವೀಟ್ ಮಾಡಿದ್ದಾರೆ. ಘಟನೆಗೆ ವಿಷಾಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಸ್ ಜೈ ಶಂಖರ್, ಈ ಘಟನೆಯ ಬಗ್ಗೆ ಮಾಹಿತಿ ನೀಡಲು ಯುಎಸ್ ಹಾಗೂ ಕೆನಡಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದ ಅಧಿಕಾರಿಗಳು ಸ್ಟೀವ್ ಶಾಂಡ್ ಎನ್ನುವವನನ್ನ ಬಂಧಿಸಿದ್ದು, ಮಾನವ ಕಳ್ಳಸಾಗಣಿಕೆಯ ಅಪರಾಧದ ಅಡಿಯಲ್ಲಿ ಬಂಧನದಲ್ಲಿ ಇರಿಸಿದ್ದಾರೆ. ಜನವರಿ 24ರಂದು ಈತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.