ಭಾನುವಾರದಂದು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಖಲಿಸ್ತಾನಿ ಪರವಿದ್ದ ಪ್ರತ್ಯೇಕತಾವಾದಿಗಳು ಕಚೇರಿ ಮುಂದಿದ್ದ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿದ್ದು, ಇದು ಭಾರತೀಯರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು.
ಇದೀಗ ಭಾರತೀಯ ಹೈಕಮಿಷನ್ ಸಿಬ್ಬಂದಿ ಬೃಹತ್ ಆದ ತ್ರಿವರ್ಣ ಧ್ವಜವನ್ನು ಕಚೇರಿ ಮೇಲೆ ಹಾರಿಸಿದ್ದು, ಪ್ರತ್ಯೇಕತಾವಾದಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಖಲಿಸ್ತಾನಿ ಪ್ರತಿಭಟನಾಕಾರರಿಗೆ ತಿರುಗೇಟು ನೀಡಿರುವುದಕ್ಕೆ ಭಾರತೀಯರು ಅಭಿನಂದಿಸುತ್ತಿದ್ದಾರೆ.
ಭಾನುವಾರದಂದು ನಡೆದ ಘಟನೆ ವೇಳೆ ಖಲಿಸ್ತಾನಿ ಧ್ವಜಗಳನ್ನು ಹಿಡಿದುಕೊಂಡು ಬಂದಿದ್ದ ಪ್ರತಿಭಟನಾಕಾರರು, ಕಚೇರಿ ಮೇಲೆ ಹಾಕಲಾಗಿದ್ದ ತ್ರಿವರ್ಣ ಧ್ವಜವನ್ನು ಕಿತ್ತುಹಾಕಿದ್ದರು. ಖಲಿಸ್ತಾನಿ ಧ್ವಜ ಹಾರಿಸಲು ಯತ್ನಿಸಿದ ವೇಳೆ ಭಾರತೀಯ ಹೈಕಮಿಷನ್ ಪ್ರತಿನಿಧಿ ಒಬ್ಬರು ಖಲಿಸ್ತಾನಿ ಧ್ವಜವನ್ನು ಕಸಿದುಕೊಂಡ ವಿಡಿಯೋ ಸಹ ಹರಿದಾಡುತ್ತಿದ್ದು ಸಿಬ್ಬಂದಿಯ ಕೆಚ್ಚೆದೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದರ ಮಧ್ಯೆ ಭಾನುವಾರ ರಾತ್ರಿಯೇ ಭಾರತ ಸರ್ಕಾರ, ಬ್ರಿಟನ್ ಡೆಪ್ಯುಟಿ ಹೈ ಕಮಿಷನರ್ ಅವರನ್ನು ಕರೆಸಿಕೊಂಡಿದ್ದು, ರಾಯಭಾರ ಕಚೇರಿ ಮುಂದೆ ನಡೆದ ಅಹಿತಕರ ಘಟನೆಗಳ ಕುರಿತು ವಿವರಣೆ ಕೇಳಿದೆ. ಅಲ್ಲದೆ ಪ್ರತಿಭಟನಾಕಾರರನ್ನು ಕಚೇರಿ ಸಮೀಪಕ್ಕೆ ಬಿಟ್ಟದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಯುಕೆ ಸರ್ಕಾರ ನೀಡಬೇಕಾದ ಭದ್ರತೆ ಕುರಿತು ಸಹ ಬ್ರಿಟನ್ ಡೆಪ್ಯೂಟಿ ಹೈಕಮಿಷನರ್ ಗಮನಕ್ಕೆ ತರಲಾಗಿದೆ. ಇದರ ಮಧ್ಯೆ ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಹೈಕಮಿಷನರ್ ಎಲ್ಲಿಸ್, ಬ್ರಿಟನ್ ಭಾರತೀಯ ರಾಯಭಾರಿ ಕಚೇರಿ ಎದುರು ನಡೆದ ಘಟನೆ ಸ್ವೀಕಾರಾರ್ಹವಲ್ಲ ಇದನ್ನು ನಾನು ಖಂಡಿಸುತ್ತೇನೆ. ಕಚೇರಿಗೆ ಬ್ರಿಟನ್ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಎಂದು ಹೇಳಿದ್ದಾರೆ.