ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಮನರಂಜನಾ ಕ್ಷೇತ್ರದ ಸಂಬಂಧಪಟ್ಟ ಯುವತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವಂತೆ ಕಾಣುತ್ತಿದೆ.
ಮೂಲಗಳ ಪ್ರಕಾರ ಟೀಂ ಇಂಡಿಯಾದ ದೀಪಕ್ ಚಹರ್ ಬಿಗ್ ಬಾಸ್ ಹಾಗೂ ಸ್ಪಿಟ್ಸ್ವಿಲ್ಲಾ ಸ್ಪರ್ಧಿ ಸಿದ್ಧಾರ್ಥ್ ಭಾರದ್ವಾಜ್ ಸಹೋದರಿ ಜಯಾ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಜಯಾ ಪ್ರಸ್ತುತ ದೆಹಲಿ ಕಾರ್ಪೋರೇಟ್ ಫರ್ಮ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಜಯಾ ಹಾಗೂ ದೀಪಕ್ ಬಹಳ ಸಮಯದಿಂದ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆಯೂ ಪ್ಲಾನ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಐಪಿಎಲ್ ಆವೃತ್ತಿಯು ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಜಯಾ ಕೂಡ ದೀಪಕ್ ಚಹರ್ ಜೊತೆ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಐಪಿಎಲ್ನಿಂದ ವಾಪಸ್ಸಾಗುತ್ತಿದ್ದಂತೆಯೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ ಟೀಂ ಇಂಡಿಯಾದ ಹೆಚ್ಚಿನ ಸದಸ್ಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಜುವೇಂದ್ರ ಚಹಲ್ ಬಹುಕಾಲದ ಗೆಳತಿ ಧನಶ್ರೀ ಜೊತೆ ಸಪ್ತಪದಿ ತುಳಿದಿದ್ದರು. ಅದೇ ರೀತಿ ಜಸ್ಪ್ರೀತ್ ಬೂಮ್ರಾ ಮದುವೆ ವಿಚಾರವಂತೂ ದೊಡ್ಡ ಮಟ್ಟದಲ್ಲಿ ಗೊಂದಲವನ್ನೇ ಸೃಷ್ಟಿಸಿತ್ತು. ಬೂಮ್ರಾ ಅನುಪಮಾ ಪರಮೇಶ್ವರ್ರನ್ನು ವಿವಾಹವಾಗುತ್ತಾರೋ ಅಥವಾ ಸಂಜನಾ ಗಣೇಶ್ರನ್ನು ವಿವಾಹವಾಗುತ್ತಾರಾ ಅನ್ನೋ ಗೊಂದಲ ಎಲ್ಲರಲ್ಲೂ ಇತ್ತು. ಕೆ.ಎಲ್. ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ಕೂಡ ಡೇಟಿಂಗ್ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದರು.