ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭಮನ್ ಗಿಲ್ ಅವರು ರಣಜಿ ಕ್ರಿಕೆಟ್ ನಲ್ಲಿಯೂ ಮುಗ್ಗರಿಸಿದ್ದಾರೆ. ಮುಂದಿನ ತಿಂಗಳು ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಇವರಿಬ್ಬರು ರಣಜಿ ಕ್ರಿಕೆಟ್ ನಲ್ಲಿ ಕೂಡ ಹಿನ್ನಡೆ ಕಂಡಿದ್ದಾರೆ.
ಇವರಷ್ಟೇ ಅಲ್ಲ ಗುರುವಾರ ಆರಂಭವಾದ ಟೂರ್ನಿಯ ಆರನೇ ಸುತ್ತಿನಲ್ಲಿ ಕಣಕ್ಕಿಳಿದಿರುವ ಭಾರತ ತಂಡದ ಸ್ಟಾರ್ ಆಟಗಾರರಲ್ಲಿ ಬಹುತೇಕರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.
ಬಾಂಧ್ರಾ ಕುರ್ಲಾ ಸೆಂಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡುತ್ತಿರುವ ರೋಹಿತ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಿ ಔಟ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ 4 ರನ್ ಗಿಗೆ ವಿಕೆಟ್ ಒಪ್ಪಿಸಿದ್ದಾರೆ. ಇವರಿಬ್ಬರೂ ಭಾರತ ತಂಡದ ಆರಂಭಿಕ ಜೋಡಿ ಕೂಡ ಆಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ತಂಡದ ಪರ ಆಡುತ್ತಿರುವ ಶುಭಮನ್ ಗಿಲ್ 4 ರನ್ ಗಳಿಗೆ ಔಟ್ ಆಗಿದ್ದಾರೆ. ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದೆಹಲಿ ತಂಡದ ಪರ ಆಡುತ್ತಿರುವ ರಿಷಬ್ ಪಂತ್, 1 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.