ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಡ್ರಗ್ಸ್, ಚಿನ್ನ, ವಜ್ರ ಸೇರಿದಂತೆ ಅನೇಕ ಮೌಲ್ಯಯುತ ವಸ್ತುಗಳನ್ನ ಕದ್ದೊಯ್ಯುವುದನ್ನ ನಾವು ನೋಡಿದ್ದೇವೆ. ಏರ್ಪೋರ್ಟಿನಲ್ಲಿರುವ ಕಸ್ಟಂ ಅಧಿಕಾರಿಗಳು ಅದನ್ನ ರೆಡ್ಹ್ಯಾಂಡ್ ಆಗಿ ಹಿಡಿದು ಆರೋಪಿಗಳನ್ನ ಕಂಬಿ ಹಿಂದೆ ಕಳುಹಿಸಿದ್ದನ್ನೂ ನಾವು ನೋಡಿರ್ತೇವೆ. ಈಗ ಮತ್ತೆ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ದೆಹಲಿ ವಿಮಾನ ನಿಲ್ದಾಣದಿಂದ ದಂಪತಿ ಪಿಸ್ತೂಲ್ಗಳನ್ನ ಕದ್ದೊಯ್ಯುತ್ತಿರುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಾಕಿಕೊಂಡಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಅಲ್ಲಿ ಗಂಡ-ಹೆಂಡತಿ ಜೋಡಿಯೊಂದು ಸುಮಾರು 45 ಪಿಸ್ತೂಲ್ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದಾಗ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ಧಾರೆ. ರಾಶಿ-ರಾಶಿ ಬಂದೂಕುಗಳನ್ನ ನೋಡಿ ಕಸ್ಟಮ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಆ ಬಂದೂಕುಗಳು ನಿಜವೇ ಅಥವಾ ನಕಲಿಯೋ ಅನ್ನೋದಕ್ಕೆ, ಈಗ ಅವುಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ.
ಈಗಾಗಲೇ ಪ್ರಕರಣದ ತನಿಖೆಯನ್ನ ಭಯೋತ್ಪಾದನಾ ನಿಗ್ರಹ ಘಟಕಕ್ಕೆ ವಹಿಸಲಾಗಿದೆ. ಈ ಬಂದೂಕುಗಳು ಸಂಪೂರ್ಣವಾಗಿ ನೈಜವಾಗಿ ಕಾಣಿಸುತ್ತಿವೆ ಎಂದು ವರದಿ ಮಾಡಿದೆ. ಇನ್ನು ಈಗಾಗಲೇ ಬಂಧಿಸಲಾಗಿರುವ ಈ ದಂಪತಿಯನ್ನ ಜಗಜಿತ್ ಸಿಂಗ್ ಮತ್ತು ಜಸ್ಪಿಂದರ್ ಕೌರ್ ಎಂದು ಗುರುತಿಸಲಾಗಿದೆ.
ಈ ದಂಪತಿಗಳು ಜುಲೈ 10 ರಂದು ವಿಯೆಟ್ನಾಂನಿಂದ ಭಾರತಕ್ಕೆ ಮರಳಿದ್ದರು. ತನ್ನ ಸಹೋದರ ಮಂಜಿತ್ಸಿಂಗ್ ನೀಡಿದ ಬ್ಯಾಗ್ಗಳನ್ನ ಜಗಜಿತ್ ಸಿಂಗ್ ಹಿಡಿದಿದ್ದರು. ಅದರಲ್ಲಿ ಈ 45 ಪಿಸ್ತೂಲ್ಗಳನ್ನ ತುಂಬಲಾಗಿತ್ತು, ಎಂದು ಅಧಿಕಾರಿಗಳು ಹೇಳಿದ್ದಾರೆ. ಬಂದೂಕುಗಳ ಒಟ್ಟು ಬೆಲೆ ಸುಮಾರು 22,50,000ರೂ. ಎಂದು ಹೇಳಲಾಗಿದೆ.
ಈ ಹಿಂದೆ ಟರ್ಕಿಯಿಂದ 25 ಪಿಸ್ತೂಲ್ಗಳನ್ನ ಭಾರತಕ್ಕೆ ತಂದಿದ್ದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ.