ಅಕ್ರಮವಾಗಿ ಸಾಗಿಸುತ್ತಿದ್ದ 425 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. 61 ಕೆಜಿ ಮಾದಕ ವಸ್ತುವನ್ನು ದೋಣಿಯಲ್ಲಿ ಸಾಗಿಸುತ್ತಿದ್ದ ಐದು ಮಂದಿ ಇರಾನ್ ಪ್ರಜೆಗಳನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ. ಗುಜರಾತ್ ಪೊಲೀಸರು ಮತ್ತು ಎಟಿಎಸ್ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಜಂಟಿ ಕಾರ್ಯಾಚರಣೆಯಲ್ಲಿ 425 ಕೋಟಿ ರೂ. ಮೌಲ್ಯದ 61 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಐವರು ಸಿಬ್ಬಂದಿಯೊಂದಿಗೆ ಇರಾನ್ ದೋಣಿಯನ್ನು ಸೋಮವಾರ ರಾತ್ರಿ ಬಂಧಿಸಿದೆ.
ಎಟಿಎಸ್ನ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಐಸಿಜಿ ತನ್ನ ಎರಡು ವೇಗದ ಗಸ್ತು ವರ್ಗದ ಹಡಗುಗಳಾದ ಐಸಿಜಿಎಸ್ ಮೀರಾ ಬೆಹ್ನ್ ಮತ್ತು ಐಸಿಜಿಎಸ್ ಅಭಿಕ್ ಅನ್ನು ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗಲು ನಿಯೋಜಿಸಿತ್ತು.
ಕತ್ತಲೆ ಸಮಯದಲ್ಲಿ ದೋಣಿಯೊಂದು ಭಾರತೀಯ ನೀರಿನಲ್ಲಿ ಓಖಾ ಕರಾವಳಿಯಿಂದ ಸುಮಾರು 340 ಕಿಮೀ(190 ಮೈಲುಗಳು) ದೂರದಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಲಾಯಿತು. ತಪ್ಪಿಸಿಕೊಳ್ಳುವ ತಂತ್ರವನ್ನು ಪ್ರಾರಂಭಿಸಿದ ನಂತರ ದೋಣಿಯನ್ನು ಹಿಂಬಾಲಿಸಿ ಐಸಿಜಿ ಹಡಗುಗಳಿಂದ ಬಲವಂತವಾಗಿ ನಿಲ್ಲಿಸಲಾಯಿತು.
ದೋಣಿಯು ಇರಾನ್ನಿಂದ ಬಂದಿದ್ದು, ವಿಚಾರಣೆ ಸಮಯದಲ್ಲಿ ಸಿಬ್ಬಂದಿ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಪರಿಶೀಲನೆ ನಡೆಸಿದಾಗ 425 ಕೋಟಿ ರೂ. ಮೌಲ್ಯದ ಸುಮಾರು 61 ಕೆಜಿ ಮಾದಕವಸ್ತುಗಳು ಪತ್ತೆಯಾಗಿವೆ. ಸಿಬ್ಬಂದಿ ಸಮೇತ ದೋಣಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗಿದೆ.