ಜಾಗತಿಕ ಮಟ್ಟದ ತಮ್ಮ ಸಹವರ್ತಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕಡಿಮೆ ವಯಸ್ಸಿನವರಾಗಿರುವ ಭಾರತದ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಓ) ಕಡಿಮೆ ಆದಾಯದ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ.
ಭಾರತೀಯ ಸಿಇಓಗಳು ಆರ್ಥಿಕ ಕ್ಷಮತೆಗಿಂತಲೂ ಕಂಪನಿಯ ಪ್ರಗತಿಗೆ ಹೆಚ್ಚಿನ ಒತ್ತು ನೀಡುವವರಾಗಿದ್ದು, ಮಂಡಳಿಗಳ ಚೇರ್ಮನ್‌ಗಿಂತ ಹೆಚ್ಚಾಗಿ ತಂತಮ್ಮ ಕಂಪನಿಗಳ ಮ್ಯಾನೇಜ್ಮೆಂಟ್‌ನ ಉನ್ನತ ಮಟ್ಟದಿಂದ ಸಲಹೆಗಳನ್ನು ಪಡೆಯಲು ಇಚ್ಛಿಸುತ್ತಾರೆ ಎಂದು ಎಗಾನ್ ಜ಼ೆಂಡರ್ ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ.
ಮಿಕ್ಕೆಲ್ಲ ಕಡೆ ಸಿಇಓಗಳು ಸಾಮಾನ್ಯವಾಗಿ ಮಂಡಳಿಗಳು ಹಾಗೂ ಮಂಡಳಿ ನಿರ್ದೇಶಕರನ್ನು ತಮ್ಮದೇ ಸ್ವಂತ ಹಾಗೂ ಕಂಪನಿಯ ಪ್ರದರ್ಶನದ ಸಂಬಂಧ ನಿರ್ಣಯಗಳನ್ನು ತೆಗೆದುಕೊಳ್ಳಲು ಅವಲಂಬಿತರಾಗಿರುತ್ತಾರೆ.
ಒಟ್ಟಾರೆ $4 ಟ್ರಿಲಿಯನ್ ಆದಾಯವಿರುವ ಕಂಪನಿಗಳಲ್ಲಿ ಕೆಲಸ ಮಾಡುವ 1000ಕ್ಕೂ ಹೆಚ್ಚು ಸಿಇಓಗಳನ್ನು ಅಧ್ಯಯನಕ್ಕೊಳಪಡಿಸಿದ ಬಳಿಕ ಈ ಅಂಶಗಳು ಕಂಡುಬಂದಿವೆ. ಭಾರತದಲ್ಲಿ 100ಕ್ಕೂ ಹೆಚ್ಚು ಸಿಇಓಗಳ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ ಅರ್ಧದಷ್ಟು ಮಂದಿ ಭಾರತೀಯ ಕಂಪನಿಗಳನ್ನು ಮುನ್ನಡೆಸುತ್ತಿದ್ದರೆ ಮಿಕ್ಕವರು ಬಹುರಾಷ್ಟ್ರೀಯ ಕಂಪನಿಗಳ ಭಾರತದ ಶಾಖೆಯನ್ನು ನಿರ್ವಹಿಸುತ್ತಿದ್ದಾರೆ.
ಜಾಗತಿಕ ಉದ್ಯಮಗಳಲ್ಲಿ ರೂಪುಗೊಳ್ಳುತ್ತಿರುವ ಹೈಬ್ರಿಡ್ ಕೆಲಸದ ಸಂಸ್ಕೃತಿ ಹಾಗೂ ಸಮಾನತೆಯ ಟ್ರೆಂಡ್‌ಗಳಿಗೆ ಪೂರಕವಾಗಿ ತಾವೂ ಸಹ ಮುಂಚೂಣಿಯಲ್ಲಿ ನಿಲ್ಲಲು, ಕಂಪನಿಯ ಪ್ರಗತಿಯನ್ನು ಆರ್ಥಿಕ ನಿರ್ಣಯಗಳಿಗಿಂತ ಹೆಚ್ಚಿನ ಆದ್ಯತೆಯಲ್ಲಿ ಭಾರತೀಯ ಸಿಇಓಗಳು ನೋಡುತ್ತಿದ್ದಾರೆ ಎಂದೂ ಸಹ ಸಮೀಕ್ಷೆ ಹೊರತಂದಿದೆ.
85%ರಷ್ಟು ಸಿಇಓಗಳು ಫೀಡ್‌ಬ್ಯಾಕ್ ಪಡೆಯಲು ಮ್ಯಾನೇಜ್ಮೆಂಟ್‌ನ ಅಗ್ರ ಸ್ತರಗಳ ಮೇಲೆ ಅವಲಂಬಿತರಾದರೆ 62%ನಷ್ಟು ಸಿಇಓಗಳು ತಮ್ಮದೇ ನಿರ್ಣಯಗಳ ಮೇಲೆ ಅವಲಂಬಿತರಾಗಿದ್ದಾರೆ.
“ಭಾರತೀಯ ಸಿಇಓಗಳಿಗೆ ತಮ್ಮ ಬೋರ್ಡ್ ಹಾಗೂ ಚೇರ್ಮನ್‌ಗಳಿಂದ ಅಸಲಿ ಇನ್‌ಪುಟ್ ಪಡೆಯುವುದಕ್ಕೆ ಒಂದು ರೀತಿಯ ಹಿಂಜರಿಕೆ ಇರುವುದು ತಿಳಿದು ಬರುತ್ತದೆ. ತಮ್ಮ ಮಂಡಳಿಗಳ ಮುಂದೆ ಇನ್ನಷ್ಟು ತೆರೆದುಕೊಳ್ಳುವ ಭಯವೇ ? ಚರ್ಚೆಗಳಿಗೆ ಪ್ರೇರಣೆ ನೀಡಬಲ್ಲ ವಾತಾವರಣ ಸೃಷ್ಟಿ ಮಾಡಲು ಮಂಡಳಿಗಳಿ ಸಾಧ್ಯವಿದೆಯೇ?” ಎಂದು ಎಗಾನ್ ಜ಼ೆಂಡರ್ಸ್‌ನ ಕೈಗಾರಿಕಾ ವಿಭಾಗದ ಮುಖ್ಯಸ್ಥ ವಿಕ್ರಂ ಜೀತ್ ಸಿಂಗ್ ಹೇಳಿದ್ದಾರೆ.
“ಇಂದಿನ ಉದ್ಯಮದ ಅನಿಶ್ಚಿತತೆಯನ್ನು ಮನಗಂಡು, ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳು ಬೇಕಿವೆ ಎಂಬುದನ್ನು ಸಿಇಓಗಳು ಅರಿಯಬೇಕಿದೆ ಮತ್ತು ಆ ಬದಲಾವಣೆ ತಮ್ಮದೇ ಆತ್ಮಾವಲೋಕನ ಹಾಗೂ ವೈಯಕ್ತಿಕ ಬೆಳವಣಿಗೆಯ ಮಟ್ಟದಿಂದ ಆಗಬೇಕಿದೆ. ತಂಡಗಳು, ಸಂಸ್ಥೆಗಳು ಹಾಗೂ ಶೇರುದಾರರು ಇದನ್ನೇ ನಿರೀಕ್ಷಿಸುವುದು” ಎಂದು ಎಗಾನ್ ಜ಼ೆಂಡರ್ ಮುಖ್ಯಸ್ಥೆ ಜಿಲ್ ಆಂಡರ್ ತಿಳಿಸಿದ್ದಾರೆ.