ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ.
ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ ಶ್ರಮದಿಂದಾಗಿ ನಾವು ಪ್ರತೀ ದಿನ ನೆಮ್ಮದಿಯಿಂದ ಮಲಗುತ್ತೇವೆ. ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ದಿನ ಕಳೆಯುತ್ತೇವೆ. ನಿಮ್ಮನ್ನು ನಮ್ಮ ಮದುವೆಗೆ ಆಹ್ವಾನಿಸಲು ಖುಷಿಯಾಗುತ್ತಿದೆ. ದಯವಿಟ್ಟು ಆ ದಿನ ಬಂದು ಆಶೀರ್ವದಿಸಬೇಕಾಗಿ ವಿನಂತಿ- ಹೀಗೆಂದು ನವೆಂಬರ್ 10ಕ್ಕೆ ಇದ್ದ ಮದುವೆಗೆ ಕೇರಳದ ರಾಹುಲ್ ಮತ್ತು ಕಾರ್ತಿಕಾ ಜೋಡಿ ಭಾರತೀಯ ಸೇನೆಯನ್ನು ಆಹ್ವಾನಿಸಿದ್ದಾರೆ.
ಈ ಆಹ್ವಾನಕ್ಕೆ ಪ್ರತಿಯಾಗಿ ಕೈಬರಹದಲ್ಲಿ ಸೇನೆಯು ನವದಂಪತಿಗೆ ಶುಭಕೋರಿ ಹಾರೈಸಿದೆ. ಈ ಲಗ್ನಪತ್ರಿಕೆಯನ್ನು ಭಾರತೀಯ ಸೇನೆಯು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ‘ರಾಹುಲ್ ಮತ್ತು ಕಾರ್ತಿಕಾ ನೀವು ನಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ. ನಿಮ್ಮ ದಾಂಪತ್ಯ ಸಂತೋಷದಿಂದ ಕೂಡಿರಲಿ’ ಎಂದು ಸೇನೆ ಬರೆದಿದೆ.
ಈ ಪೋಸ್ಟ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಈ ಪೋಸ್ಟ್ ಗೆ 85 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ. ಇದು ಬಹಳ ಅದ್ಭುತವಾದ ಆಲೋಚನೆ. ನಮ್ಮ ದೇಶ ಸೇವೆ ಮಾಡುತ್ತಿರುವ ಹೀರೋಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ ಈ ರೀತಿ ಬಹಳ ಚೆನ್ನಾಗಿದೆ ಎಂದು ಹಲವರು ಕಮೆಂಟ್ನಲ್ಲಿ ತಿಳಿಸಿದ್ದಾರೆ.