ರಜೆ ಮೇಲೆ ತನ್ನೂರಿಗೆ ಬಂದಿದ್ದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನೊಬ್ಬ ರಾತ್ರೋರಾತ್ರಿ ‘ಫೇಮಸ್’ ಆಗಬೇಕೆಂಬ ಕಾರಣಕ್ಕೆ ಮಾಡಿರುವ ಕೆಲಸ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಜಿಲ್ಲೆ ನಿವಾಸಿ ಶೈನ್ ಕುಮಾರ್ ಎಂಬಾತ ರಜೆಯ ಮೇಲೆ ತನ್ನ ಊರು ಕಡಕಲ್ ಗೆ ಬಂದಿದ್ದ. ಇತ್ತೀಚೆಗೆ ಕೆಲ ಗಂಟೆಗಳ ಕಾಲ ನಾಪತ್ತೆಯಾಗಿದ್ದು, ವಾಪಸ್ ಬಂದಾಗ ಆತನ ಬಟ್ಟೆ ಹರಿದಿತ್ತಲ್ಲದೆ ಮೈಮೇಲೆ ಗಾಯವಾಗಿತ್ತು. ಇದರ ಜೊತೆಗೆ ಬೆನ್ನಿನ ಮೇಲೆ ಹಸಿರು ಬಣ್ಣದಲ್ಲಿ PFI ಎಂದು ಬರೆಯಲಾಗಿತ್ತು.
ಈ ಕುರಿತು ವಿಚಾರಿಸಿದ ವೇಳೆ, ಐದಾರು ಜನರ ಗುಂಪೊಂದು ನನ್ನನ್ನು ಸಮೀಪದ ರಬ್ಬರ್ ಪ್ಲಾಂಟೇಶನ್ ಗೆ ಎಳೆದೊಯ್ದು ಮನ ಬಂದಂತೆ ಥಳಿಸಿದ್ದಲ್ಲದೆ, ಬೆನ್ನಿನ ಮೇಲೆ ಪಿಎಫ್ಐ ಎಂದು ಹಸಿರು ಬಣ್ಣದಲ್ಲಿ ಬರೆದಿದ್ದಾರೆಂದು ಹೇಳಿದ್ದ. ಈ ಕುರಿತು ಕಡಕ್ಕಲ್ ಪೊಲೀಸರು ಕೇಸ್ ಕೂಡ ದಾಖಲಿಸಿಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಮಗ್ರ ತನಿಖೆ ನಡೆಸಿದ ವೇಳೆ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ತನ್ನ ಸ್ನೇಹಿತನೊಬ್ಬನ ಜೊತೆ ಪಾನಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಶೈನ್ ಕುಮಾರ್, ನಾನು ಫೇಮಸ್ ಆಗಬೇಕಿದೆ. ಹೀಗಾಗಿ ನನ್ನ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆ ಎಂದಿದ್ದಾನೆ. ಆದರೆ ಕುಡಿದ ಮತ್ತಿನಲ್ಲಿದ್ದ ಆತನ ಸ್ನೇಹಿತ ಡಿಎಫ್ಐ ಎಂದು ಬರೆದಿದ್ದು, ಅದನ್ನು ಬಳಿಕ ಪಿಎಫ್ಐ ಎಂದು ತಿದ್ದಲಾಗಿದೆ.
ಅಲ್ಲದೆ ಆ ಸ್ನೇಹಿತನಿಗೆ ತನ್ನನ್ನು ಥಳಿಸುವಂತೆ ಶೈನ್ ಕುಮಾರ್ ಹೇಳಿದ್ದು, ಅದಕ್ಕೆ ಆತ ನಿರಾಕರಿಸಿದ್ದಾನೆ. ಕಡೆಗೆ ಶರ್ಟ್ ಹರಿದುಕೊಂಡು, ತನ್ನ ಬಾಯಿ ಹಾಗೂ ಕೈಗಳನ್ನು ಕಟ್ಟಿಸಿಕೊಂಡ ಶೈನ್ ಕುಮಾರ್ ಇಷ್ಟೆಲ್ಲಾ ಕಥೆ ಕಟ್ಟಿದ್ದಾನೆ. ಇದೀಗ ಪೊಲೀಸರು ಶೈನ್ ಕುಮಾರ್ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ. ಅಂದ ಹಾಗೇ ಕೆಲವರು ಈ ಘಟನೆಯನ್ನು ಬಳಸಿಕೊಂಡು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆಂದು ವದಂತಿ ಹಬ್ಬಿಸಿದ್ದರು.