ನವದೆಹಲಿ: ಭಾರತೀಯ ಸೇನೆ ‘ಅಗ್ನಿವೀರ್’ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ಇನ್ನು ಮುಂದೆ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಪರೀಕ್ಷೆ ಬರೆಯುವುದನ್ನು ಕಡ್ಡಾಯವಾಗಿದೆ.
ನೇಮಕಾತಿಯಲ್ಲಿ ಒಟ್ಟು ಮೂರು ಹಂತಗಳನ್ನು ಅನುಸರಿಸಲಾಗುತ್ತದೆ. ಹಂತ 1 ರಲ್ಲಿ joinindianarmy.nic.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕು.
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು 2ನೇ ಹಂತದಲ್ಲಿ ನೇಮಕಾತಿಗೆ ಕರೆಯಲಾಗುವುದು. ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಮತ್ತು ಮಾಪನ ಪರೀಕ್ಷೆಗಳಿಗೆ ಒಳಗಾಗಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಹಂತ 3ರಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ, ‘ಅರಿವಿನ ಅಂಶʼಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯಲ್ಲಿ ಜನಸಂದಣಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಡಳಿತಾತ್ಮಕ ಕಾರ್ಯಗಳನ್ನೂ ಕಡಿಮೆ ಮಾಡುತ್ತದೆ ಎಂದು ಬೆಂಗಳೂರಿನ ಪ್ರಧಾನ ನೇಮಕಾತಿ ವಲಯದ ಹೆಚ್ಚುವರಿ ನಿರ್ದೇಶಕ ಮೇಜರ್ ಜನರಲ್ ಪಿ. ರಮೇಶ್ ಮಾಹಿತಿ ನೀಡಿದ್ದಾರೆ.