ಉತ್ತರ ಕಾಶಿಯ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಎಂಟ್ರಿ ಕೊಟ್ಟಿದೆ.
ಹೌದು. ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಮೆರಿಕದ ದೈತ್ಯ ಆಗರ್ ಯಂತ್ರ ಕಬ್ಬಿಣದ ಸರಳುಗಳಿಗೆ ಸಿಲುಕಿ ಮುರಿದ ನಂತರ ಯಂತ್ರಗಳಬಳಕೆ ನಿಲ್ಲಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಸಾಥ್ ನೀಡಿದೆ.
ಎಲ್ಲರ ಸುರಕ್ಷತೆಗಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಈ ಯೋಜನೆಗಳನ್ನು ಬಹಳ ಸಿಂಕ್ರೊನೈಸ್ಡ್ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಮತ್ತು ತಜ್ಞರು ರೆಡಿ ಇದ್ದಾರೆ ಎಂದು ಎನ್ಡಿಎಂಎ ಸದಸ್ಯ, ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ) ಹೇಳಿದ್ದಾರೆ.
ಕಾರ್ಮಿಕರ ರಕ್ಷಣೆಗೆ ಡಿಆರ್ಡಿಒ ಸೇರಿದಂತೆ ಹಲವು ಏಜೆನ್ಸಿಗಳು ತೊಡಗಿಸಿಕೊಂಡಿದ್ದು, ಪ್ರಸ್ತುತ ಸುರಂಗಕ್ಕೆ ಲಂಬವಾಗಿ ಅಗೆತ ಮುಂದುವರಿಸಿದ್ದಾರೆ. 360 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಬಿದ್ದಿರುವ 41 ಕಾರ್ಮಿಕರಿಗೆ ಬೆಳಕು, ಆಮ್ಲಜನಕ, ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಕೆಲಸಗಾರರ ಜತೆ ಸೇನಾ ಸಿಬ್ಬಂದಿ ಕೂಡ ಸೇರಿಕೊಂಡಿದ್ದು, ಕೊರೆಯುವಿಕೆ ಮತ್ತು ಅವಶೇಷಗಳನ್ನು ಹೊರತೆಗೆಯುವ ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.