ಭಾರತೀಯ ಸೇನೆ ಹಾಗೂ ವಾಯುಸೇನೆಗೆ 800 ಕಿ.ಮೀ ದೂರದ ಗುರಿಯನ್ನೂ ನಾಶ ಮಾಡುವ ‘ಬ್ರಹ್ಮೋಸ್’ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳು ಲಭ್ಯವಾಗಲಿವೆ. ರಕ್ಷಣಾ ಖರೀದಿ ಮಂಡಳಿಯು ಸುಮಾರು 250 ಕ್ಷಿಪಣಿಗಳ ಖರೀದಿಗೆ ಒಪ್ಪಿಗೆ ನೀಡಿದ್ದು, ಅಂತಿಮ ಒಪ್ಪಿಗೆಗಾಗಿ ಭದ್ರತಾ ಸಮಿತಿಗೆ ಕಳುಹಿಸಲಾಗಿದೆ. ಈ ಸೇರ್ಪಡೆಯಿಂದ ಭಾರತದ ಸೇನಾ ಸಾಮರ್ಥ್ಯ ಹೆಚ್ಚಲಿದೆ.
ಈ ಕ್ಷಿಪಣಿಗಳನ್ನು ಮರುಭೂಮಿ ಹಾಗೂ ಎತ್ತರದ ಪ್ರದೇಶಗಳಲ್ಲೂ ನಿಯೋಜಿಸಲಾಗುವುದು. ಈ ಕ್ಷಿಪಣಿಗಳು ಮೊದಲು 300 ಕಿ.ಮೀ ವ್ಯಾಪ್ತಿ ಹೊಂದಿದ್ದವು. ಆದರೆ ಈಗ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, 800 ಕಿ.ಮೀ ಗಿಂತಲೂ ಹೆಚ್ಚಿನ ದೂರದ ಗುರಿಗಳನ್ನೂ ನಾಶ ಮಾಡಬಲ್ಲವು. ಭಾರತೀಯ ನೌಕಾಪಡೆಯೂ ಇದೇ ಮಾದರಿಯ ಕ್ಷಿಪಣಿಗಳನ್ನು ಖರೀದಿಸುತ್ತಿದೆ.
ಭಾರತದ ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮದಲ್ಲಿ ಬ್ರಹ್ಮೋಸ್ ಯಶಸ್ವಿ ಜಂಟಿ ಉದ್ಯಮವಾಗಿದೆ. ಇದರ ಬಹುತೇಕ ಭಾಗವನ್ನು ರಷ್ಯಾದಿಂದ ಉತ್ಪಾದಿಸಲಾಗುತ್ತದೆ. ಭಾರತವು ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ಸ್ವದೇಶೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಖಾಸಗಿ ವಲಯದ ಬೆಂಬಲದೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿದೆ. ರಷ್ಯಾದ ಬೆಂಬಲದೊಂದಿಗೆ ಫಿಲಿಪೈನ್ಸ್‌ಗೆ ಕ್ಷಿಪಣಿಯನ್ನು ಯಶಸ್ವಿಯಾಗಿ ರಫ್ತು ಮಾಡಲಾಗುತ್ತಿದೆ. ಹಲವು ದೇಶಗಳು ಇದರ ಬಗ್ಗೆ ಆಸಕ್ತಿ ತೋರುತ್ತಿವೆ. ಬ್ರಹ್ಮೋಸ್ ಏರೋಸ್ಪೇಸ್ ಲಕ್ನೋದಲ್ಲಿ ‘ಬ್ರಹ್ಮೋಸ್ ನೆಕ್ಸ್ಟ್ ಜನರೇಷನ್’ ಕ್ಷಿಪಣಿಯನ್ನು ಉತ್ಪಾದಿಸಲು ಕಾರ್ಯನಿರ್ವಹಿಸುತ್ತಿದೆ.