ನ್ಯೂಯಾರ್ಕ್: ಮತ್ತೋರ್ವ ಭಾರತೀಯ ಮೂಲದ ಪ್ರಜೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಸಂಪುಟ ಸೇರಿದ್ದಾರೆ.
ಬೈಡೆನ್ ಅವರ ಸಂಪುಟದಲ್ಲಿ ಸದ್ಯ ಹಲವು ಭಾರತೀಯರಿದ್ದಾರೆ. ಈಗ ಮತ್ತೋರ್ವರ ಸೇರ್ಪಡೆಯಿಂದ ದೇಶದ ಹೆಮ್ಮೆ ಮತ್ತಷ್ಟು ಹೆಚ್ಚಾಗುತ್ತಿದೆ.
ಭಾರತೀಯ ಅಮೆರಿಕನ್ ಗೌತಮ್ ರಾಘವನ್ ಈಗ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಯುನಿಸೆಫ್ ನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಕ್ಯಾಥಿ ರಸೆಲ್ ರನ್ನು ನೇಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಹುದ್ದೆಗೆ ಗೌತಮ್ ರಾಘವನ್ ರನ್ನು ನೇಮಕ ಮಾಡಲಾಗಿದೆ.
ಗೌತಮ್ ರಾಘವನ್, ಭಾರತದಲ್ಲಿಯೇ ಜನಿಸಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅಲ್ಲಿಯ ಸಿಯಾಟಲ್ ನಲ್ಲಿ ಬೆಳೆದಿದ್ದಾರೆ. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ವೆಸ್ಟ್ ವಿಂಗರ್ಸ್: ಸ್ಟೋರೀಸ್ ಫ್ರಮ್ ದಿ ಡ್ರೀಮ್ ಚೇಸರ್ಸ್, ಚೇಂಜ್ ಮೇಕರ್ಸ್ ಮತ್ತು ಹೋಪ್ ಕ್ರಿಯೇಟರ್ಸ್ ಇನ್ಸೈಡ್ ದಿ ಒಬಾಮಾ ವೈಟ್ ಹೌಸ್ ಸೇರಿದಂತೆ ಹಲವು ಪುಸ್ತಕಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ವಾಷಿಂಗ್ಟನ್ ಡಿಸಿಯಲ್ಲಿ ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಗೌತಮ್ ಅವರು 2021 ರಿಂದ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಈ ಹಿಂದೆ, ಬೈಡೆನ್-ಹ್ಯಾರಿಸ್ ಪರಿವರ್ತನಾ ತಂಡದ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮೊದಲ ಉದ್ಯೋಗಿ ಕೂಡ ಆಗಿದ್ದಾರೆ.
ಅಲ್ಲದೇ, ಹಲವು ಜವಾಬ್ದಾರಿಗಳ್ನು ಅವರು ನಿರ್ವಹಿಸಿದ್ದಾರೆ. ಬೈಡನ್ ತಮ್ಮ ಸಂಪುಟದಲ್ಲಿ ಈಗಾಗಲೇ 20 ಭಾರತೀಯರಿಗೆ ಅವಕಾಶ ನೀಡಿದ್ದಾರೆ.