ಉತ್ತರ ಭಾರತದಲ್ಲಿ ಬಿಜೆಪಿಗೆ ಸ್ಪರ್ಧಿಸಲು ಅವಕಾಶ ನೀಡದೆ ತಾವೇ ಸ್ಪರ್ಧಿಸಿದ್ದರೆ ದೇಶಕ್ಕೆ ನಮ್ಮ ಪಕ್ಷದ ಪ್ರಧಾನಿ ಸಿಗುತ್ತಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ತಳದಿಂದ ಎತ್ತರಕ್ಕೆ ಕೊಂಡೊಯ್ದಿದ್ದೇವೆ. ಬಾಬರಿ ಗಲಾಟೆ ನಂತರ ಉತ್ತರ ಭಾರತದಲ್ಲಿ ಶಿವಸೇನೆ ಅಲೆ ಇತ್ತು, ಆ ಸಮಯದಲ್ಲಿ ಬಿಜೆಪಿಗೆ ಅವಕಾಶ ನೀಡದೆ ನಾವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ದೇಶದಲ್ಲಿ ನಮ್ಮ ಶಿವಸೇನೆಯ ಪ್ರಧಾನಿ ಇರುತ್ತಿದ್ದರು. ಆದರೆ ನಾವು ಬಿಜೆಪಿ ಬೆಳೆಯಲು ಅದನ್ನ ತೊರೆದೆವು ಎಂದು ಸಂಜಯ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದರು. ಇದರಿಂದ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ವಾಕ್ಸಮರ ಸೃಷ್ಟಿಯಾಗಿದೆ, ಈ ನಡುವೆ ಸಂಜಯ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಬಿಜೆಪಿ ಕೇವಲ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸುತ್ತಿದೆ ಎಂದಿದ್ದಾರೆ.
ನನ್ನ ಏಕೈಕ ನಿರಾಶೆ ಎಂದರೆ ಒಂದು ಕಾಲದಲ್ಲಿ ಅವರು ನಮ್ಮ ಸ್ನೇಹಿತರಾಗಿದ್ದರು. ನಾವು ಅವರನ್ನು ಬೆಳೆಸಿದ್ದೇವೆ. ನಾನು ಮೊದಲೇ ಹೇಳಿದಂತೆ ಬಿಜೆಪಿಯೊಂದಿಗೆ ನಮ್ಮ 25 ವರ್ಷಗಳ ಮೈತ್ರಿ ವ್ಯರ್ಥವಾಯಿತು ಎಂದು ಠಾಕ್ರೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಿಂದುತ್ವದ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಠಾಕ್ರೆ, ಹಿಂದುತ್ವದ ಸಿದ್ಧಾಂತದ ಮೇಲೆ ಬಿಜೆಪಿ ಮಾಲೀಕತ್ವವನ್ನು ಹೊಂದಿಲ್ಲ. ಶಿವಸೇನೆ ಹಿಂದುತ್ವಕ್ಕೆ ಮಹತ್ವ ನೀಡುತ್ತದೆ. ಹಿಂದುತ್ವದ ಹೆಸರಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ, ಹಿಂದುತ್ವ ಅವರಿಗೆ ನೆಪ ಅಷ್ಟೇ. ಬಿಜೆಪಿಯವರು ಹಿಂದುತ್ವದ ನಕಲಿ ಚರ್ಮ ಧರಿಸಿದ್ದಾರೆ. ಜನರು ನೀವು ಹಿಂದುತ್ವ ತೊರೆದಿದ್ದೀರ ಎಂದು ನಮ್ಮನ್ನು ಪ್ತಶ್ನಿಸುತ್ತಾರೆ. ನಾವು ಬಿಜೆಪಿ ಪಕ್ಷವನ್ನ ತೊರೆದಿದ್ದೇವೆ ಹೊರತು ಹಿಂದುತ್ವವನ್ನಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಈಗಿರುವ ಶಿವಸೇನೆ ನಾಯಕರು, ಪಕ್ಷದ ಸಂಸ್ಥಾಪಕ ಬಾಳ್ ಸಾಹೇಬ್ ಠಾಕ್ರೆ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿರುವ ಬಿಜಪಿ ನಾಯಕ ರಾಮ್ ಕದಮ್ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ರಾಜಕೀಯ ಮತ್ತು ಜೀವನದಲ್ಲಿ ತಮ್ಮ ಪಕ್ಷವು ಎಂದಿಗೂ ಕಾಂಗ್ರೆಸ್‌ಗೆ ಸೇರುವುದಿಲ್ಲ. ಅಂತಹ ಸಂದರ್ಭಗಳು ಎದುರಾದರೆ ಪಕ್ಷಕ್ಕೆ (ಕಚೇರಿ) ಬೀಗ ಹಾಕುತ್ತೇನೆ ಎಂದಿದ್ದ ಬಾಳ್ ಠಾಕ್ರೆಯವರ ಸಿದ್ಧಾಂತವನ್ನು ಶಿವಸೇನೆ ಅನುಸರಿಸುತ್ತಿದೆಯೆ. ಬಿಜೆಪಿಯವರಿಗೆ ಹಿಂದುತ್ವದ ಉಪನ್ಯಾಸ ನೀಡುವ ಮೊದಲು ಉದ್ಧವ್ ಠಾಕ್ರೆ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಮ್ ಕದಮ್ ಹೇಳಿದ್ದಾರೆ.