ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ ಬಳಿಕ ಉಕ್ರೇನ್ನಲ್ಲಿರುವ ವಲಸಿಗರ ಸ್ಥಿತಿ ಅಸಹನೀಯವಾಗಿದೆ.
ಭಾರತದಿಂದಲೂ ಸಾಕಷ್ಟು ಮಂದಿ ಉಕ್ರೇನ್ನಲ್ಲಿ ವಾಸವಿದ್ದಾರೆ. ಉಕ್ರೇನ್ನಲ್ಲಿರುವವರನ್ನು ವಾಪಸ್ ಕರೆ ತರಲು ಏರ್ ಇಂಡಿಯಾ ವಿಮಾನ ದೆಹಲಿಯಿಂದ ಹೊರಟ್ಟಿತ್ತಾದರೂ ಅಲ್ಲಿ ಏರ್ಪೋರ್ಟ್ಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ವಿಮಾನಗಳು ವಾಪಸ್ ದೆಹಲಿಗೆ ಬಂದಿವೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ಭಾರತವು ಉಕ್ರೇನ್ನಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉಕ್ರೇನ್ನಲ್ಲಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ಮಾರ್ಗಗಳನ್ನು ಕೇಂದ್ರ ಸರ್ಕಾರವು ಹುಡುಕುತ್ತಿದೆ. ಸ್ಥಳಾಂತರಿಸಲು ಮಾರ್ಗಕ್ಕಾಗಿ ರೋಮೇನಿಯಾ ಹಾಗೂ ಹಂಗೇರಿಯೊಂದಿಗೆ ಸಂವಾದ ನಡೆಸುತ್ತಿದ್ದೇವೆ ಎಂದು ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ
ಕೇಂದ್ರ ಸರ್ಕಾರ ಮತ್ತು ಭಾರತದ ರಾಯಭಾರ ಕಚೇರಿಯು ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ. ಉಜ್ಹೋರೋಡ್ ಬಳಿಯ CHOP-ZAHONY ಹಂಗೇರಿಯನ್ ಗಡಿ ಮತ್ತು ಚೆರ್ನಿವ್ಟ್ಸಿ ಬಳಿಯ PORUBNE-SIRET ರೊಮೇನಿಯನ್ ಗಡಿ ಇದೆ ಎನ್ನಲಾಗಿದೆ.
“ಭಾರತೀಯ ಪ್ರಜೆಗಳು, ವಿಶೇಷವಾಗಿ ಗಡಿ ಚೆಕ್‌ಪೋಸ್ಟ್‌ಗಳಿಗೆ ಸಮೀಪದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಈ ಆಯ್ಕೆಯನ್ನು ವಾಸ್ತವಿಕಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತಂಡದ ಜೊತೆಗಿನ ಸಮನ್ವಯದೊಂದಿಗೆ ಸಂಘಟಿತ ರೀತಿಯಲ್ಲಿ ಮೊದಲು ನಿರ್ಗಮಿಸಲು ಸಲಹೆ ನೀಡಲಾಗುತ್ತಿದೆ” ಎಂದು ಅದು ಸೇರಿಸಿದೆ.