ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು.
ಶಾರ್ಟ್ ಪಿಚ್ ಎಸೆತದಿಂದ ಬುಮ್ರಾ ಹೆಲ್ಮೆಟ್‌ಗೆ ಬಡಿದ ವೇಗಿ ಮಾರ್ಕ್ ವುಡ್ ಉಭಯ ತಂಡಗಳ ಆಟಗಾರರ ನಡುವಿನ ಮನೋಬೌದ್ಧಿಕ ಸಮರಕ್ಕೆ ನಾಂದಿ ಹಾಡಿದರು. ಇದರ ಬೆನ್ನಿಗೇ ಬೌನ್ಸರ್‌ಗಳ ಸುರಿಮಳೆ ಸುರಿಸಿದ ಇಂಗ್ಲೆಂಡ್ ವೇಗಿಗಳೊಂದಿಗೆ ಕ್ಷೇತ್ರರಕ್ಷಕರೂ ಸಹ ಸ್ಲೆಡ್ಜಿಂಗ್‌ಗೆ ಇಳಿದುಬಿಟ್ಟರು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಬುಮ್ರಾ ಮತ್ತು ಶಮಿ, 9ನೇ ವಿಕೆಟ್‌ಗೆ 89 ರನ್ ಪೇರಿಸುವ ಮೂಲಕ ಆತಿಥೇಯರಿಗೆ 272 ರನ್‌ಗಳ ಸವಾಲಿನ ಗುರಿ ನೀಡಲು ನೆರವಾದರು.
ಬ್ಯಾಟಿಂಗ್‌ನಲ್ಲಿ ಮಿಂಚಿ ತಲಾ 56ರನ್ ಮತ್ತು 34 ರನ್ ಗಳಿಸಿದ ಶಮಿ ಮತ್ತು ಬುಮ್ರಾ ಇಂಗ್ಲೆಂಡ್ ಬ್ಯಾಟಿಂಗ್‌ಗೆ ಇಳಿದಾದ ಅಕ್ಷರಶಃ ಬೆಂಕಿಯುಂಡೆಗಳನ್ನು ಎಸೆಯುವ ಮೂಲಕ ಆತಿಥೇಯರ ಬ್ಯಾಟ್ಸ್‌ಮನ್‌ಗಳನ್ನು ನಿರುತ್ತರರನ್ನಾಗಿ ಮಾಡಿದರು. ಇವರಿಗೆ ತಕ್ಕ ಸಾಥ್ ನೀಡಿದ ಮತ್ತಿಬ್ಬರು ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ತಂಡವನ್ನು 120 ರನ್‌ಗಳಿಗೆ ಕಟ್ಟಿಹಾಕಿದರು.
ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸರ್ಕಾರ; ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ
ಭಾರತದ ಆಟಗಾರರ ತೀವ್ರತೆ ಸ್ವಲ್ಪವೂ ಕಮ್ಮಿಯಾಗದಂತೆ ನೋಡಿಕೊಂಡ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಶೀಲ ನಾಯಕತ್ವವೂ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಗ್ಗೆ ಮಾತನಾಡಿದ ಇಂಗ್ಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್, ಭಾರತದ ಬಾಲಂಗೋಚಿಗಳನ್ನು ಕೆಣಕುವ ಪ್ಲಾನ್ ಇಂಗ್ಲೆಂಡ್ ತಂಡದ ಮ್ಯಾನೇಜ್ಮೆಂಟ್‌ನದ್ದಾಗಿದ್ದು, ಅದು ಅವರಿಗೇ ಉಲ್ಟಾ ಹೊಡೆದಿದೆ ಎಂದಿದ್ದಾರೆ.
“ಇಂಗ್ಲೆಂಡ್ ತರಬೇತುದಾರ ಸಿಲ್ವರ್ ವುಡ್‌ರಿಂದ ಇದೆಲ್ಲಾ ಆಯಿತು ಎಂದು ನನಗೆ ಸ್ಪಷ್ಟವಿದೆ. ಭಾರತದ ನಂ 10 ಮತ್ತು 11ಅನ್ನು ಬೌನ್ಸರ್‌ಗಳ ಮೂಲಕ ಗುರಿಯಾಗಿಸಿ ಅವರನ್ನು ಕಟ್ಟಿಹಾಕೋಣ ಎಂಬುದು ಅವರ ಐಡಿಯಾ ಆಗಿತ್ತು. ನಮ್ಮ ತಂಡದ ಒಬ್ಬ ಆಟಗಾರನ ವಿರುದ್ಧ ನೀವು ಬಂದರೆ ನಾವೆಲ್ಲಾ ನಿಮ್ಮ ವಿರುದ್ಧ ನಿಲ್ಲುತ್ತೇವೆ ಎಂಬ ಭಾರತದ ನಿಲುವು ಅವರಿಗಿ ಚೆನ್ನಾಗಿ ಕೆಲಸ ಮಾಡಿದೆ,” ಎಂದು ಪನೇಸರ್ ತಿಳಿಸಿದ್ದಾರೆ.
“ಇಂಗ್ಲೆಂಡ್‌ಗೆ ಕೊಹ್ಲಿ ಎಂಥ ವ್ಯಕ್ತಿ ಎಂಬುದು ಗೊತ್ತಿರಲಿಲ್ಲವೇನೋ. ಎಲ್ಲವನ್ನೂ ಗಮನಿಸುತ್ತಿದ್ದ ಆತ ಇಂಗ್ಲೆಂಡ್‌ಗೆ ತಿರುಗೇಟು ನೀಡಲು ಮುಂದಾದರು. ಆತ ಯಾವತ್ತಿಗೂ ಕ್ಷಮಿಸುವ ವ್ಯಕ್ತಿಯಲ್ಲ. ಯಾವುದೇ ಪರಿಸ್ಥಿತಿಯಲ್ಲೂ ತನ್ನ ತಂಡವನ್ನು ಬೆಂಬಲಿಸುತ್ತಾರೆ ವಿರಾಟ್. ಏನನ್ನು ಇಂಗ್ಲೆಂಡ್ ಆರಂಭಿಸಿತೋ ಅದೇ ಅವರಿಗೆ ತಿರುಗೇಟು ನೀಡಿತು. ಇಂಗ್ಲೆಂಡ್ ತಂಡವನ್ನು ಭಾರತೀಯರು ಎಲ್ಲದರಲ್ಲೂ ಮೀರಿ ನಿಂತರು. 5ನೇ ದಿನ ರಿಶಭ್ ಪಂತ್‌ರನ್ನು ಬೇಗನೇ ಔಟ್ ಮಾಡಿದ ಕೂಡಲೇ ಬುಮ್ರಾ ಮತ್ತು ಶಮಿರನ್ನು ಸಹ ಬೇಗ ಔಟ್ ಮಾಡಬಹುದೆಂದು ಇಂಗ್ಲೆಂಡ್ ಅಂದುಕೊಂಡಿದ್ದರು. ಆದರೆ ಎಲ್ಲವೂ ಅವರಿಗೆ ಉಲ್ಟಾ ಆಯಿತು. ಭಾರತೀಯರೊಂದಿಗೆ ನೀವು ಕೆಣಕುವ ಆಟ ಆಡಲಾಗದು. ವಿರಾಟ್‌ಗೆ ಕೆಣಕಿಸಿಕೊಳ್ಳುವುದು ಇಷ್ಟವಾಗದು. ಆತ ನಿಮಗೆ ಬಲವಾಗಿ ತಿರುಗೇಟು ಕೊಡುತ್ತಾರೆ,” ಎಂದು ಪನೇಸರ್ ಮುಂದುವರೆದು ತಿಳಿಸಿದ್ದಾರೆ.