ತಿರುಮಲ ತಿರುಪತಿ ದೇವಸ್ಥಾನಗಳ ಟ್ರಸ್ಟ್(ಟಿಟಿಡಿ) ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತಿರುಪತಿ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಪ್ಲಾನ್ ಮಾಡಿಕೊಂಡಿದೆ.
ಟಿಟಿಡಿ ಆರಂಭದಲ್ಲಿ ಬೆರಳೆಣಿಕೆಯಷ್ಟು ದೇವಾಲಯಗಳ ವ್ಯವಹಾರಗಳನ್ನು ನಿರ್ವಹಿಸುತ್ತಿತ್ತು. 1933 ರಲ್ಲಿ ಟ್ರಸ್ಟ್ ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ವೆಂಕಟೇಶ್ವರನಿಗೆ ಅರ್ಪಿತವಾದ 58 ದೇವಾಲಯಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿವೆ.
ಟಿಟಿಡಿಯ ಹೊರಗಿನ ಮೊದಲ ದೇವಾಲಯವೆಂದರೆ ಉತ್ತರಾಖಂಡದ ಋಷಿಕೇಶದಲ್ಲಿರುವ ಬಾಲಾಜಿ ದೇವಾಲಯ. ಇದು 1969 ರಲ್ಲಿ ನಿರ್ಮಾಣವಾಯಿತು. ನಂತರ 2019 ರಲ್ಲಿ ಟಿಟಿಡಿ ಕನ್ಯಾಕುಮಾರಿಯಲ್ಲಿ ವೆಂಕಟೇಶ್ವರ ದೇವಾಲಯವನ್ನು ಸ್ಥಾಪಿಸಿತು. ಈ ವರ್ಷ ಜೂನ್ 8 ರಂದು ಜಮ್ಮುವಿನಲ್ಲಿ ದೇವಾಲಯವನ್ನು ತೆರೆಯಲಾಯಿತು.
ಇತ್ತೀಚೆಗೆ, ಟ್ರಸ್ಟ್ ಮಹಾರಾಷ್ಟ್ರದ ಬಾಲಾಜಿ ದೇವಸ್ಥಾನದ ಪ್ರತಿಕೃತಿಗೆ ಅಡಿಗಲ್ಲು ಹಾಕಿತು. ಗುಜರಾತ್‌ನ ಗಾಂಧಿನಗರ, ಛತ್ತೀಸ್‌ಗಢದ ರಾಯ್‌ಪುರ ಮತ್ತು ಬಿಹಾರದಲ್ಲಿ ಇನ್ನೂ ಮೂರು ದೇವಾಲಯಗಳನ್ನು ನಿರ್ಮಿಸಲು ಟಿಟಿಡಿ ಚಿಂತನೆ ನಡೆಸುತ್ತಿದೆ.
ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಅವರು, 28 ರಾಜ್ಯಗಳು ಮತ್ತು ಯುಟಿಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದು ಸರ್ವಶಕ್ತನನ್ನು ಭಕ್ತರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.