ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ರಿಯಾಜ್ ಅತ್ತಾರಿ ಮತ್ತು ಮೊಹಮ್ಮದ್ ಗೌಸ್ ರಾಜಸ್ತಾನದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದಲ್ಲಿ ತಮಗಿರುವ ಸಂಪರ್ಕಗಳನ್ನು ಬಳಸಿಕೊಂಡು ಬಿಜೆಪಿಯೊಳಗೆ ನುಸುಳಲು ಪ್ರಯತ್ನಿಸಿದ್ದರು ಎಂಬುದು ಬಹಿರಂಗವಾಗಿದೆ.
ಸ್ಥಳೀಯ ಬಿಜೆಪಿ ಸದಸ್ಯರೊಂದಿಗೆ ಹಂತಕ ಅತ್ತಾರಿ ಇರುವ ಹಲವು ಛಾಯಾಚಿತ್ರಗಳು ಪತ್ತೆಯಾಗಿವೆ. ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಈತ ಕಾಣಿಸಿಕೊಂಡಿದ್ದ. ಈ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹಂತಕ ಅತ್ತಾರಿ ಬಿಜೆಪಿ ಸದಸ್ಯ ಎಂಬ ಕೂಗು ಎದ್ದಿತ್ತು.
ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಂಸದೆ ರೇಣುಕಾ ಚೌಧರಿ ಕೂಡ ಅತ್ತಾರಿ ಬಿಜೆಪಿ ಸದಸ್ಯ ಎಂಬಂತೆ ಟ್ವೀಟ್ ಮಾಡಿದ್ದರು. “ಬಿಜೆಪಿ ಅಲ್ಪಸಂಖ್ಯಾತರ ಘಟಕ, ಕೊಲೆಗಾರ ರಿಯಾಜ್‌ನನ್ನು ಬಿಜೆಪಿ ಕಾರ್ಯಕರ್ತನೆಂದು ಒಪ್ಪಿಕೊಂಡಿದೆ” ಅಂತಾ ಟ್ವೀಟ್ ಮಾಡಿದ್ದರು. ಇದು ಜಾಲತಾಣಗಳಲ್ಲಿ ವೈರಲ್ ಆಯ್ತು. ಆದರೆ ಅತ್ತಾರಿ ಬಿಜೆಪಿ ಸದಸ್ಯ ಎಂಬುದು ದೃಢಪಟ್ಟಿಲ್ಲ.
ಕೆಲವೊಂದು ಪಕ್ಷದ ಕಾರ್ಯಕ್ರಮಗಳಲ್ಲಿ ಆತ ಕಾಣಿಸಿಕೊಂಡಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ರಿಯಾಜ್ ಅತ್ತಾರಿ ಪಕ್ಷಕ್ಕೆ ಔಪಚಾರಿಕವಾಗಿ ಸೇರಿದ್ದಾನೆಯೇ ಎಂಬುದು ತನಿಖೆಯಿಂದ್ಲೇ ಬಹಿರಂಗವಾಗಬೇಕಿದೆ. ಆಹ್ವಾನವೇ ಇಲ್ಲದಿದ್ರೂ ಈತ ಕೆಲವು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದನಂತೆ. 2019 ರಲ್ಲಿ ಮೊಹಮ್ಮದ್ ತಾಹಿರ್ ಎಂಬ ವ್ಯಕ್ತಿಯ ಖಾತೆಯಿಂದ ಅಪ್‌ಲೋಡ್ ಮಾಡಲಾದ ಈ ಫೋಟೋಗಳನ್ನು ಇರ್ಷಾದ್ ಚೈನ್‌ವಾಲಾ ಎಂಬ ಇನ್ನೊಬ್ಬ ವ್ಯಕ್ತಿಗೂ ಟ್ಯಾಗ್ ಮಾಡಲಾಗಿದೆ.
ಚೈನ್ವಾಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜಸ್ಥಾನ ಘಟಕದ ಸದಸ್ಯ. ಒಂದು ದಶಕದಿಂದ ಬಿಜೆಪಿ ಸದಸ್ಯರಾಗಿರುವ ಉದಯಪುರ ನಿವಾಸಿ. ಚೈನ್‌ವಾಲಾ ಆಗಮಿಸುತ್ತಿದ್ದ ಪಕ್ಷದ ಕಾರ್ಯಕ್ರಮಗಳಿಗೆ ಅತ್ತಾರಿಯೂ ಬರ್ತಿದ್ದ. ಮತ್ತೊಂದೆಡೆ ಮೊಹಮ್ಮದ್ ತಾಹಿರ್, ಬಿಜೆಪಿ ಹಾಗೂ ಅತ್ತಾರಿ ನಡುವಿನ ಸೇತುವೆಯಾಗಿದ್ದ ಅಂತಾ ಚೈನ್‌ವಾಲಾ ಹೇಳಿಕೊಂಡಿದ್ದಾನೆ. ಆದ್ರೆ ಅತ್ತಾರಿ ಪಕ್ಷದ ಸದಸ್ಯನಲ್ಲ ಎಂದು ಚೈನ್‌ವಾಲಾ ಸ್ಪಷ್ಟಪಡಿಸಿದ್ದಾರೆ. ಪಕ್ಷದೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಅವನಿಗಿತ್ತು ಅಂತಾ ಹೇಳಿದ್ದಾರೆ.