ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧದ ಗಂಭೀರ ಆರೋಪದ ಮೇಲೆ ಕೆನಡಾ ಅಧಿಕಾರಿಗೆ ಭಾರತ ಸಮನ್ಸ್ ನೀಡಿ ಕರೆಸಿಕೊಂಡು ಖಂಡನೆ ವ್ಯಕ್ತಪಡಿಸಿದೆ.
ಕೆನಡಾದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರದ ಆರೋಪ ಮಾಡಿದ ಕುರಿತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ ಹಿನ್ನಲೆಯಲ್ಲಿ ವಿದೇಶಾಂಗ ಸಚಿವಾಲಯವು ಕೆನಡಾ ಪ್ರತಿನಿಧಿಗೆ ಸಮನ್ಸ್ ನೀಡಿದೆ.
ತಮ್ಮ ಅಸಂಬದ್ಧ ಆರೋಪಕ್ಕೆ ಪ್ರತಿಕ್ರಿಯೆಯಾಗಿ ನಿನ್ನೆ ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಪ್ರತಿನಿಧಿ ಕರೆಸಿ ಸ್ಪಷ್ಟನೆ ಕೇಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಂದೀರ್ ಜೈಸ್ವಾಲ್ ತಿಳಿಸಿದ್ದಾರೆ.
ನಾವು ನಿನ್ನೆ ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆದಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ನೀಡಿದ ಹೇಳಿಕೆ ಖಂಡಿಸಿದ್ದೇವೆ ಎಂದು ಅವರು ತಿಳಿಸಿದರು. ಕೇಂದ್ರ ಗೃಹ ಸಚಿವರ ಬಗ್ಗೆ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳನ್ನು ಭಾರತ ಸರ್ಕಾರವು ಪ್ರಬಲವಾಗಿ ಖಂಡಿಸುತ್ತದೆ ಎಂದು ಕೆನಡಾ ಪ್ರತಿನಿಧಿಗೆ ತಿಳಿಸಲಾಗಿದೆ.