ಭಾರತ ಇಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ವಿಸ್ತರಿತ ವ್ಯಾಪ್ತಿಯ ಕ್ಷಿಪಣಿ ತನ್ನ ಗುರಿಯನ್ನು ನಿಖರತೆಯೊಂದಿಗೆ ಹೊಡೆದಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಭಾರತವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಏರ್-ಲಾಂಚ್ಡ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ, ಇದು 800 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರದ ಶತ್ರು ಗುರಿಗಳನ್ನು ಹೊಡೆಯಲು ಸಾಧ್ಯವಾಗುತ್ತದೆ.
ಈ ಹಿಂದೆ ಕ್ಷಿಪಣಿಯು Su-30MKI ಯುದ್ಧ ವಿಮಾನದಿಂದ ಬಿಡುಗಡೆಯಾದ ನಂತರ ಸುಮಾರು 300 ಕಿಲೋಮೀಟರ್‌ಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿತ್ತು.
ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯನ್ನು ಈಗಾಗಲೇ ಹೆಚ್ಚಿಸಲಾಗಿದೆ. ಹೆಚ್ಚಿನ ಎತ್ತರದಲ್ಲಿ ವಾಯುಗಾಮಿಯಾಗಿರುವ ಕ್ಷಿಪಣಿಯು ಹೆಚ್ಚು ದೂರ ಕ್ರಮಿಸಬಲ್ಲದು. 800 ಕಿಮೀ ಮತ್ತು ಅದಕ್ಕೂ ಮೀರಿದ ಗುರಿಗಳನ್ನು ಹೊಡೆಯಬಲ್ಲದು ಎಂದು ಮೂಲಗಳು ತಿಳಿಸಿವೆ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಮೇಲ್ಮೈಯಿಂದ ಮೇಲ್ಮೈಗೆ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದ್ದಕ್ಕಾಗಿ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅಭಿನಂದಿಸಿದ್ದಾರೆ. ಕಾರ್ಯಾಚರಣೆ ಪರಿಶೀಲಿಸಲು ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರದಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು.