
ನವದೆಹಲಿ: ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳನ್ನು ಬೇಗನೆ ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಭಾರತ ಮಂಗಳವಾರ ಪುನರುಚ್ಚರಿಸಿದೆ.
ಭಾರತೀಯ ಪ್ರಜೆಯೊಬ್ಬರ ಸಾವಿಗೆ ಪ್ರತಿಕ್ರಿಯಿಸುತ್ತಾ, ವಿದೇಶಾಂಗ ಸಚಿವಾಲಯವು ಸಂತಾಪ ಸೂಚಿಸಿ ಹೇಳಿಕೆ ನೀಡಿ ಇತರರ ಬಿಡುಗಡೆಗೆ ಬೇಡಿಕೆ ಇಟ್ಟಿದೆ.
ಕೇರಳದ ವ್ಯಕ್ತಿಯ ಸಾವಿನ ನಂತರ ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಬೇಗನೆ ಹಿಂದಿರುಗಿಸಬೇಕೆಂದು ಭಾರತ ‘ಬಲವಾಗಿ’ ಒತ್ತಾಯಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡಿದ್ದ ಕೇರಳದ ಭಾರತೀಯ ಪ್ರಜೆಯೊಬ್ಬರ ದುರದೃಷ್ಟಕರ ಸಾವಿನ ಬಗ್ಗೆ ನಮಗೆ ತಿಳಿದುಬಂದಿದೆ. ಇದೇ ರೀತಿಯ ನೇಮಕಾತಿ ಪಡೆದಿದ್ದ ಕೇರಳದ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡು ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಕ್ಕೆ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯು ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಮೃತದೇಹ ಭಾರತಕ್ಕೆ ಸಾಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗಾಯಗೊಂಡಿದ್ದ ಮತ್ತೊಬ್ಬ ಕೇರಳದ ವ್ಯಕ್ತಿಯನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್ ಕಳುಹಿಸುವಂತೆಯೂ ವಿದೇಶಾಂಗ ಸಚಿವಾಲಯ ತಿಳಿಸಿದೆ.