ಭಾರತದಲ್ಲಿ ಪ್ರಸ್ತುತ 4 ಜಿ ನೆಟ್ವರ್ಕ್ ಕಾರ್ಯ ನಿರ್ವಹಿಸುತ್ತಿದ್ದು, ಈಗ 5 ಜಿ ನೆಟ್ವರ್ಕ್ ನತ್ತ ದೇಶ ಸಾಗುತ್ತಿದೆ. ಇದರ ಮಧ್ಯೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.
ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 6 ಜಿ ಟೆಲಿಕಾಂ ಜಾಲ ದೇಶವಾಸಿಗಳಿಗೆ ಲಭ್ಯವಾಗಲಿದ್ದು, ಮುಂದಿನ ಒಂದೂವರೆ ದಶಕದಲ್ಲಿ 5ಜಿ ತಂತ್ರಜ್ಞಾನದಿಂದಲೇ ಭಾರತದ ಆರ್ಥಿಕತೆಗೆ 450 ಶತಕೋಟಿ ಡಾಲರ್ ಹರಿದುಬರಲಿದೆ. ಈ ತಂತ್ರಜ್ಞಾನವು ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಈ ಮೊದಲು ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಈ ಸಂಖ್ಯೆ 200ಕ್ಕೆ ತಲುಪಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲದೆ ಸರ್ಕಾರ ಟೆಲಿಕಾಂ ಉದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ ನೀಡಿದ ಕಾರಣ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ದೊರೆಯುತ್ತಿದೆ ಎಂದು ತಿಳಿಸಿದರು.