ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಭಾನುವಾರ ಐಸಿಸಿ ಬಿಡುಗಡೆ ಮಾಡಿದ ನೂತನ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದ ಭಾರತ ಮೊದಲ ಸ್ಥಾನ ಗಳಿಸಿದೆ. ಟೆಸ್ಟ್ ಸರಣಿ ಜಯಿಸಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಈಗಾಗಲೇ ಮೊದಲ ಸ್ಥಾನ ಪಡೆದ ಭಾರತ ಕ್ರಿಕೆಟ್ ನ ಎಲ್ಲಾ ಮೂರು ಮಾದರಿಗಳ ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ.
ಭಾರತ 122 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದರೆ ಭಾರತಕ್ಕಿಂತ ಐದು ಅಂಕ ಕಡಿಮೆ ಹೊಂದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. 111 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.
ಏಕದಿನ ರ್‍ಯಾಂಕಿಂಗ್ ನಲ್ಲಿ ಭಾರತ 121 ಅಂಕ ಹೊಂದಿದ್ದು, ಆಸ್ಟ್ರೇಲಿಯಾ 118 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಟಿ20 ಯಲ್ಲಿ ಭಾರತ 266 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 256 ಅಂಕಗಳೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.