ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮತ್ತಷ್ಟು ಬಲ ಪಡೆದಿದೆ. ಕೊರೊನಾ ವಿರುದ್ಧ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ಅನೇಕ ಲಸಿಕೆಗೆ ಅನುಮೋದನೆ ನೀಡಲಾಗಿದೆ.
ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಂಡಿದೆ. ಶುಕ್ರವಾರ ಲಸಿಕೆಯಲ್ಲಿ ಭಾರತ ದಾಖಲೆ ಬರೆದಿದೆ. ಶುಕ್ರವಾರ ಒಂದೇ ದಿನ 1 ಕೋಟಿ, 64 ಸಾವಿರ ಜನರಿಗೆ ಕೊರೊನಾ ಲಸಿಕೆಯನ್ನು ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ಸುಮಾರು 62 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಈ ಬಗ್ಗೆ ಮಾಹಿತಿ ನೀಡಿದ್ದರು. ನಾಗರಿಕರಿಗೆ ಅಭಿನಂದನೆಗಳು. ಭಾರತದಲ್ಲಿ ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇನ್ನೂ ಲೆಕ್ಕಾಚಾರ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ದೇಶ ಒಂದೇ ದಿನ ಕೋಟಿಗೂ ಹೆಚ್ಚು ಲಸಿಕೆ ಹಾಕಿದೆ. ಲಸಿಕೆ ಹಾಕಿಸಿಕೊಂಡವರು ಹಾಗೂ ಈ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
4.05 ಕೋಟಿ ಲಸಿಕೆ ಡೋಸ್, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಬಳಿ ಇದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 58.86 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ. ಆಗಸ್ಟ್ 17 ರಂದು, ದೇಶಾದ್ಯಂತ 88 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿತ್ತು.
ಪ್ರತಿ ದಿನ 1 ಕೋಟಿ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಶುಕ್ರವಾರ ಸಾಧಿಸಿ ತೋರಿಸಿದೆ. ಉತ್ತರ ಪ್ರದೇಶದಲ್ಲಿ ಶುಕ್ರವಾರ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಅಲ್ಲಿ 29 ಲಕ್ಷದ 62 ಸಾವಿರ ಡೋಸ್ ನೀಡಲಾಗಿದೆ.
ದೇಶದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆ ಲಭ್ಯವಿದೆ. ದೇಶದಲ್ಲಿ ಅತಿ ಹೆಚ್ಚು ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.