ನವದೆಹಲಿ: ಭಾರತದ ರಕ್ಷಣಾ ಪಡೆಗಳು 2023ನೇ ಸಾಲಿನಲ್ಲಿ 7,10,600 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಜಾಗತಿಕ ರಕ್ಷಣಾ ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸ್ಟಾಕ್ ಹೋಂ ಶಾಂತಿ ಸಂಶೋಧನಾ ಸಂಸ್ಥೆ ವರದಿ ನೀಡಿದೆ.
ಕಳೆದ ವರ್ಷ ಭಾರತ ತನ್ನ ಸೇನಾ ವೆಚ್ಚವನ್ನು ಶೇಕಡ 4.2 ರಷ್ಟು ಹೆಚ್ಚಳ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ರಕ್ಷಣೆಗೆ ಅಧಿಕ ಹಣ ವ್ಯಯ ಮಾಡಿದ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದ ವರದಿ ಈ ಮಾಹಿತಿ ನೀಡಿದೆ.
ವಿಶ್ವದಾದ್ಯಂತ ಸೇನಾ ವೆಚ್ಚದ ಪ್ರಮಾಣ 2023 ರಲ್ಲಿ 2,443 ಶತ ಕೋಟಿ ಡಾಲರ್ ಆಗಿದ್ದು, 2022ಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇಕಡ 6.8ರಷ್ಟು ಹೆಚ್ಚಳ ಆಗಿದೆ. 2023ರಲ್ಲಿ ಸೇನೆಗೆ ಅತಿ ಹೆಚ್ಚು ಹಣ ಖರ್ಚು ಮಾಡಿದ 10 ರಾಷ್ಟ್ರಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
2023 ರಲ್ಲಿ ರಕ್ಷಣಾ ವಲಯಕ್ಕೆ 83.6 ಶತ ಕೋಟಿ ಡಾಲರ್ ಹಣ ವ್ಯಯ ಮಾಡಿದೆ. ಅಮೆರಿಕ 916 ಶತಕೋಟಿ ಡಾಲರ್, ಚೀನಾ 296 ಶತಕೋಟಿ ಡಾಲರ್, ರಷ್ಯಾ 109 ಶತಕೋಟಿ ಡಾಲರ್ ರಕ್ಷಣಾ ವಲಯಕ್ಕೆ ಹಣ ವ್ಯಯಿಸಿದ್ದು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.