ನವದೆಹಲಿ: ದತ್ತಾಂಶ ರಕ್ಷಣೆ ಉಲ್ಲಂಘನೆಗೆ ದಂಡದ ಮೊತ್ತವನ್ನು 500 ಕೋಟಿ ರೂ.ವರೆಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಹೊಸ ಕರಡು ಪ್ರಸ್ತಾವನೆ ಪ್ರಕಟಿಸಲಾಗಿದೆ.
ವೈಯಕ್ತಿಕ ದತ್ತಾಂಶ ರಕ್ಷಣೆ ವಿಧೇಯಕದ ಅಡಿಯಲ್ಲಿ ನಿಬಂಧನೆಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡದ ಮೊತ್ತವನ್ನು 500 ಕೋಟಿ ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ 2019 ರಲ್ಲಿ ಹೊರಡಿಸಿದ್ದ ವೈಯಕ್ತಿಕ ದತ್ತಾಂಶ ವಿಧೇಯಕ ಕರಡು ಪ್ರತಿಯಲ್ಲಿ ದಂಡದ ಮೊತ್ತವನ್ನು 15 ಕೋಟಿ ರೂ. ಅಥವಾ ಸಂಬಂಧಿಸಿದ ಕಂಪನಿಯ ಜಾಗತಿಕ ವಹಿವಾಟಿನ ಶೇಕಡ 4 ರಷ್ಟು ಎಂದು ನಿಗದಿಪಡಿಸಲಾಗಿತ್ತು.
ಕಳೆದ ಆಗಸ್ಟ್ ನಲ್ಲಿ ಸರ್ಕಾರ ಈ ವಿಧೇಯಕ ಹಿಂಪಡೆದುಕೊಂಡಿದ್ದು, ಪರಿಷ್ಕೃತ ವಿಧೇಯಕ ಪ್ರಕಟಿಸಿದೆ. ಕರಡು ಪ್ರಸ್ತಾವನೆಯಲ್ಲಿ ದಂಡದ ಮೊತ್ತವನ್ನು 500 ಕೋಟಿ ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಭಾರತದ ದತ್ತಾಂಶ ರಕ್ಷಣಾ ಮಂಡಳಿ ಸ್ಥಾಪಿಸುವ ಪ್ರಸ್ತಾವನೆ ಕೂಡ ವೈಯಕ್ತಿಕ ದತ್ತಾಂಶ ರಕ್ಷಣೆ ವಿಧೇಯಕ ಕರಡು ಒಳಗೊಂಡಿದೆ.